ವಿಲಾಸಿ ಎಸ್‌ಯುವಿ ಮಾರುಕಟ್ಟೆಗೆ ಸ್ಕೋಡಾದ ಕೋಡಿಯಾಕ್ ಪ್ರವೇಶಿಸಿದೆ. ಆದರೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಇದೇ ಮಾದರಿಯ ವಿಲಾಸಿ ಎಸ್‌ಯುವಿಗಳನ್ನೂ ಒಮ್ಮೆ ನೋಡಿದರೆ, ಆಯ್ಕೆ ಸುಲಭವಾಗಲಿದೆ.
ವಿಲಾಸಿ ಎಸ್‌ಯುವಿಗಳ ವಿಭಾಗದಲ್ಲಿ ಟೊಯೊಟಾ ಫಾರ್ಚ್ಯೂನರ್, ಹ್ಯುಂಡೇ ಟುಕ್ಸಾನ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆರ್–ಲೈನ್, ಎಂಜಿ ಗ್ಲಾಸ್ಟರ್ ಹಾಗೂ ಜೀಪ್ ಮೆರಿಡಿಯನ್‌ಗಳಿವೆ. ಈ ವಿಭಾಗಕ್ಕೆ ಸ್ಕೋಡಾ ಕೊಡಿಯಾಕ್ ಸೇರಿದೆ.
ಕೋಡಿಯಾಕ್ ಎಕ್ಸ್ ಶೋರೂಂ ಬೆಲೆಯು ₹47 ಲಕ್ಷದಿಂದ ಆರಂಭಗೊಂಡು ₹49 ಲಕ್ಷವರೆಗೂ ಲಭ್ಯ. ಮೂರು ಸಾಲಿನ ಈ ಕಾರು 2017ರಲ್ಲಿ ಬಿಡುಗಡೆಗೊಂಡಿತು. ಸದ್ಯ ಬಹಳಷ್ಟು ಬದಲಾವಣೆಗಳೊಂದಿಗೆ ಹೊಸ ಸ್ವರೂಪದಲ್ಲಿ ಮತ್ತೆ ಮಾರುಕಟ್ಟೆ ದಾಂಗುಡಿ ಇಟ್ಟಿದೆ. ಇದೇ ಬೆಲೆಯ ಶ್ರೇಣಿಯಲ್ಲಿ ಹಲವು ಎಸ್‌ಯುವಿಗಳಿದ್ದು, ಅವುಗಳ ಪರಿಚಯ ಇಲ್ಲಿದೆ.

ಎಂಜಿ ಗ್ಲಾಸ್ಟರ್
ಏಳು ಆಸನಗಳ ಪೂರ್ಣ ಗಾತ್ರದ ಎಸ್‌ಯುವಿ ಇದು. ಕೋಡಿಯಾಕ್‌ನಲ್ಲಿ ಕೇವಲ ಪೆಟ್ರೋಲ್ ಮಾದರಿ ಮಾತ್ರ ಲಭ್ಯ. ಆದರೆ ಗ್ಲಾಸ್ಟರ್‌ನಲ್ಲಿ ಡೀಸೆಲ್ ಎಂಜಿನ್ ಆಯ್ಕೆಯೂ ಇದೆ. ಜತೆಗೆ ಒಳಾಂಗಣ ವಿಶಾಲವಾಗಿದೆ. ಹಲವು ಸೌಕರ್ಯಗಳಲ್ಲಿ ಏಳು ಬಗೆಯ ಟೆರೈನ್ ಮೋಡ್‌ಗಳ ಆಯ್ಕೆ ಲಭ್ಯ. ಆರು ಏರ್‌ಬ್ಯಾಗ್, ಎಡಿಎಎಸ್ ಹಾಗೂ ಇನ್ನೂ ಹಲವು ಸೌಲಭ್ಯಗಳಿವೆ.
ಎಂಜಿ ಗ್ಲೋಸ್ಟರ್ ಬೆಲೆಯು ₹39.57 ಲಕ್ಷದಿಂದ ₹41.85 ಲಕ್ಷದವರೆಗೆ ಲಭ್ಯ. ಸ್ಕೋಡಾಕ್ಕೆ ಹೋಲಿಸಿದರೆ ಬೆಲೆಯಲ್ಲಿ ಇದು ತುಸು ಅಗ್ಗ. ಮೆಜೆಸ್ಟರ್ ಈ ವರ್ಷ ಬರುತ್ತಿದ್ದು, ಜೆಎಸ್‌ಡಬ್ಲೂ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಇನ್ನಷ್ಟು ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಹೊಂದಿದೆ.

ಜೀಪ್ ಮೆರಿಡಿಯನ್
ಈ ವಿಭಾಗದಲ್ಲಿ ಅಗ್ಗದ ಕಾರೆಂದರೆ ಅದು ಜೀಪ್ ಮೆರಿಡಿಯನ್. ಡೀಸೆಲ್ ಎಂಜಿನ್ ಹೊಂದಿರುವ ಈ ಕಾರಿನಲ್ಲಿ ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಿವೆ. ಐದರಿಂದ ಏಳು ಪ್ರಯಾಣಿಕರು ಇದರಲ್ಲಿ ಸಾಗಬಹುದು.
ಇಷ್ಟೇ ಅಲ್ಲ, ಜೀಪ್‌ನಲ್ಲಿ 4X4 ಸೌಲಭ್ಯವೂ ಇದೆ. ಹೀಗಾಗಿ ಆಫ್ ರೋಡ್‌ನಲ್ಲೂ ಉತ್ತಮ ಅನುಭೂತಿ ನೀಡಲಿದೆ. 5 ಆಸನಗಳ ಜೀಪ್ ಮೆರಿಡಿಯನ್ ಬೆಲೆಯು ₹25ಲಕ್ಷಕ್ಕೆ ಲಭ್ಯ. 4X4 ಸೌಲಭ್ಯದ ಡೀಸೆಲ್ ಎಂಜಿನ್ ಹೊಂದಿರುವ ಮೆರಿಡಿಯನ್ ಬೆಲೆ ₹38.79 ಲಕ್ಷವಿದೆ.

ಫೋಕ್ಸ್‌ವ್ಯಾಗನ್ ಟಿಗ್ವಾನ್ ಆರ್–ಲೈನ್
2025ರ ಆರಂಭದಲ್ಲಿ ಸ್ಕೋಡಾದ ಸೋದರ ಸಂಬಂಧಿ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆರ್–ಲೈನ್ ಮಾರುಕಟ್ಟೆಗೆ ತಂದಿತು. ಎರಡೂ ಕಾರುಗಳ ಒಂದೇ ಮಾದರಿಯ ಚಾಸೀಸ್ ಅನ್ನು ಹಂಚಿಕೊಳ್ಳುತ್ತಿವೆ. ಕೋಡಿಯಾಕ್‌ನ ಚಾಸೀಸ್ ಇಲ್ಲೇ ತಯಾರಾದರೆ, ಫೋಕ್ಸ್‌ವ್ಯಾಗನ್‌ದು ಆಮದಾಗುತ್ತದೆ.
2.0 ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್, ಸ್ಪೋರ್ಟ್ಸ್ ಸೀಟ್‌ಗಳು, ಒಳಾಂಗಣ ಸಂಪೂರ್ಣ ಕಡುಕಪಪ್ಉ ಮತ್ತು ಇನ್ನೂ ಹಲವು ಸೌಲಭ್ಯಗಳು ಟಿಗ್ವಾನ್ ಆರ್–ಲೈನ್‌ನಲ್ಲಿ ಸೇರಿಸಲಾಗಿದೆ. ಸ್ಕೋಡಾದ ಕೋಡಿಯಾಕ್ ಅನ್ನು ಇದರೊಂದಿಗೆ ಹೋಲಿಸಬಹುದು. ಆದರೆ ಫೋಕ್ಸ್‌ವ್ಯಾಗನ್ ಎಸ್‌ಯುವಿ ತುಸು ದುಬಾರಿ. ಇದರ ಬೆಲೆ ₹49ಲಕ್ಷ.

ಟೊಯೊಟಾ ಫಾರ್ಚ್ಯೂನರ್
ಎಸ್‌ಯುವಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಾರೆಂದರೆ ಅದು ಟೊಯೊಟಾ ಫಾರ್ಚ್ಯೂನರ್. ನಯವಾದ ರಸ್ತೆಯಾಗಲಿ ಅಥವಾ ರಸ್ತೆ ಇಲ್ಲದ ಪ್ರದೇಶವೇ ಆಗಿರಲಿ, ಫಾರ್ಚ್ಯೂನರ್ ಎಲ್ಲದಕ್ಕೂ ಸೈ. ಹೀಗಿದ್ದರೂ ಹೊಸ ಕೋಡಿಯಾಕ್ ಈ ವಿಭಾಗಕ್ಕೂ ಸ್ಪರ್ಧೆ ನೀಡುವಷ್ಟರ ಮಟ್ಟಿಗೆ ತನ್ನನ್ನು ಬದಲಿಸಿಕೊಂಡಿದೆ. ಸುಂದರ ಒಳಾಂಗಣ, ಕಾರ್ಯಕ್ಷಮತೆ, ಸೌಕರ್ಯ ಎಲ್ಲಾ ವಿಭಾಗಗಳಲ್ಲೂ ಕೋಡಿಯಾಕ್ ಸದ್ದು ಮಾಡುತ್ತಿದೆ.

ಹ್ಯುಂಡೇ ಟುಸ್ಸಾನ್
ಕೋಡಿಯಾಕ್‌ನಂತೆಯೇ ಹ್ಯುಂಡೇ ಕಂಪನಿಯ ಟುಸ್ಸಾನ್ ಜಾಗತಿಕ ಕಾರು. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಲಭ್ಯವಿರುವ ಈ ಎಸ್‌ಯುವಿಗಳು ಭಾರತದಲ್ಲೂ ಲಭ್ಯ. ಸೌಕರ್ಯಗಳಲ್ಲಿ ಕೋಡಿಯಾಕ್‌ಗಿಂತ ಟುಸ್ಸಾನ್ ಒಂದು ಹೆಜ್ಜೆ ಮುಂದಿದೆ. ಎಡ್ಯಾಸ್ ಮತ್ತು ಆರಾಮದಲ್ಲಿ ಉತ್ತಮವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಟುಸ್ಸಾನ್ ಲಭ್ಯ. ಟುಸ್ಸಾನ್ ಹೊಸ ಮಾದರಿಯ ಬೆಲೆ ₹29 ಲಕ್ಷದಿಂದ ಆರಂಭವಾಗಿ ₹36ಲಕ್ಷದವರೆಗೂ ಲಭ್ಯ.
ಈ ಇಷ್ಟು ಎಸ್‌ಯುವಿ ಮಾದರಿಗಳಲ್ಲಿ ನಿಮ್ಮಿಷ್ಟದ್ದು ಯಾವುದು ಮತ್ತು ಏಕೆ ಎಂಬುದನ್ನು ಕಮೆಂಟ್ ಬಾಕ್ಸ್‌ನಲ್ಲಿ ಬರೆದು ತಿಳಿಸಿ.