₹80 ಲಕ್ಷದ ರೋಲ್ಸ್‌ರಾಯ್ಸ್ ಇನ್ನು ₹40ಲಕ್ಷಕ್ಕೆ ಲಭ್ಯ. ಮಿನಿಕೂಪರ್, ಬೆಂಟ್ಲೆ, ರೋಲ್ಸ್‌ರಾಯ್ಸ್‌ಗಳೂ ಕಡಿಮೆ ಬೆಲೆಗೆ ಸಿಗುವ ದಿನಗಳು ದೂರವಿಲ್ಲ… ಇಂಥ ಸುದ್ದಿಗಳು ಈಗ ಹರಿದಾಡುತ್ತಿವೆ. ಆದರೆ ಇದು ವದಂತಿಯಲ್ಲ.
ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ. ಇದರ ಪರಿಣಾಮವಾಗಿ ಬ್ರಿಟನ್‌ನಲ್ಲಿ ತಯಾರಾಗುವ ಪ್ರತಿಷ್ಠಿತ ಬ್ರಾಂಡ್‌ಗಳ ಕಾರು ಹಾಗೂ ಮೋಟಾರ್‌ಬೈಕ್‌ಗಳು ಭಾರತೀಯರಿಗೆ ಈ ಹಿಂದೆ ಪಾವತಿಸುತ್ತಿದ್ದ ಬೆಲೆಯ ಅರ್ಧ ಬೆಲೆಗೆ ಸಿಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ಭಾರತ ಮತ್ತು ಬ್ರಿಟನ್ ನಡುವಿನ ಒಪ್ಪಂದದ ಪರಿಣಾಮ ಅಲ್ಲಿ ತಯಾರಾಗುವ ವಾಹನಗಳಿಗೆ ಈ ಮೊದಲು ಭಾರತ ಶೇ 100ರಷ್ಟು ಆಮದು ಸುಂಕ ವಿಧಿಸುತ್ತಿತ್ತು. ಅದನ್ನು ಈಗ ಕೇವಲ ಶೇ 10ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಬ್ರಿಟಿಷ್ ಕಾರುಗಳಾದ ರೋಲ್ಸ್ ರಾಯ್ಸ್, ಬೆಂಟ್ಲೆ, ಜಾಗ್ವಾರ್ ಲ್ಯಾಂಡ್ ರೋವರ್, ಲೋಟಸ್, ಆಸ್ಟನ್ ಮಾರ್ಟಿನ್, ಮೆಕ್ಲರ್ನ್ ಅನ್ನು ಈ ಮೊದಲಿಗಿಂತ ಕಡಿಮೆ ಬೆಲೆಗೆ ಭಾರತೀಯರು ಖರೀದಿಸಬಹುದು.
ಅದರಂತೆಯೇ ಟ್ರ್ಯುಂಪ್, ಬಿಎಸ್ಎ, ನಾರ್ಟನ್ ಬೈಕ್‌ಗಳ ಬೆಲೆಗಳೂ ತಗ್ಗಲಿವೆ. ಈ ಎಲ್ಲಾ ವಾಹನಗಳು ಸಂಪೂರ್ಣ ಸಿದ್ಧಗೊಂಡ ನಂತರ ಭಾರತಕ್ಕೆ ಆಮದಾಗುತ್ತಿದ್ದವು. ಹೆಚ್ಚಿನ ಆಮದು ಸುಂಕದಿಂದ ಇವುಗಳು ದುಬಾರಿಯಾಗಿದ್ದವು. ಇದೀಗ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಪರಿಣಾಮ ಈ ವಾಹನಗಳ ಬೆಲೆಗಳು ಇಳಿಕೆಯಾಗಲಿವೆ. ಹೀಗಾಗಿ ಭಾರತೀಯರಿಗೆ ಗಗನಕುಸುಮಗಳೇ ಆಗಿದ್ದ ಬ್ರಿಟಿಷ್ ಕಾರುಗಳು ಈಗ ಅಷ್ಟೇನು ದುಬಾರಿಯಾಗದು.
ಮತ್ತೊಂದೆಡೆ ಭಾರತದಲ್ಲಿ ತಯಾರಾಗುತ್ತಿರುವ ಬ್ಯಾಟರಿ ಚಾಲಿತ ಇವಿ ವಾಹನಗಳ ರಫ್ತಿಗೂ ಉತ್ತಮ ವೇದಿಕೆ ಸಿದ್ಧಗೊಂಡಿದೆ. ಬ್ರಿಟನ್‌ನಲ್ಲಿ ಈ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಭಾರತೀಯ ಕಂಪನಿಗಳಿಗೆ ಬ್ರಿಟನ್ ಉತ್ತಮ ಮಾರುಕಟ್ಟೆಯಾಗುವ ಅವಕಾಶಗಳಿವೆ.
ಬ್ರಿಟನ್‌ನಲ್ಲೂ ತಮ್ಮ ತಯಾರಿಕಾ ಘಟಕ ಹೊಂದಿರುವ ನಿಸ್ಸಾನ್ ಮತ್ತು ಟೊಯೊಟಾಗಳು ತಮ್ಮ ಬಹಳಷ್ಟು ವಾಹನಗಳನ್ನು ಈಗ ಇದೇ ಒಪ್ಪಂದದಡಿ ಸೃಷ್ಟಿಯಾಗಿರುವ ಮಾರ್ಗದಲ್ಲಿ ಭಾರತಕ್ಕೆ ತರುವ ಸಾಧ್ಯತೆಗಳಿವೆ. ಚೀನಾ ಕೂಡಾ ಇದೇ ಮಾರ್ಗವನ್ನು ಅನುಸರಿಸಿ, ಹೊಸ ಮಾದರಿಯ ಕಾರುಗಳನ್ನು ಭಾರತಕ್ಕೆ ತರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಈ ಎಲ್ಲದರ ಪರಿಣಾಮ ಭವಿಷ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಗೆಬಗೆಯ ಕಾರುಗಳು ಭಾರತೀಯರಿಗೆ ಲಭ್ಯವಾಗಲಿದೆ. ಈ ಒಪ್ಪಂದ ಕೇವಲ ಕಾರು, ಬೈಕ್‌ಗಳಿಗಷ್ಟೇ ಅಲ್ಲ. ಬ್ರಿಟನ್‌ನ ಬೆರ್ರಿ ಬ್ರೋಸ್, ಗ್ಲೆನ್ ಸ್ಕಾಟಿಯಾ ಸೇರಿದಂತೆ ಪ್ರಮುಖ ವಿಸ್ಕಿಗಳೂ ಭಾರತದಲ್ಲಿ ಕಡಿಮೆ ಬೆಲೆಗೆ ಸಿಗುವ ಎಲ್ಲಾ ಸಾಧ್ಯತೆಗಳು ಈ ನಿಜವಾಗಿವೆ.