ಜಗತ್ತಿನಲ್ಲೇ ತೀವ್ರವಾಗಿ ಬೆಳೆಯುತ್ತಿರುವ ಭಾರತೀಯ ಕಾರು ಮಾರುಕಟ್ಟೆಯನ್ನು ಚೆನ್ನಾಗಿ ಅರಿತಿರುವ ಟೊಯೊಟಾ, ತನ್ನ ವಿಲಾಸಿ ಮಾದರಿಯಾದ ಕೊರೊಲಾವನ್ನು ಕ್ರಾಸ್ ಹೆಸರಿನಲ್ಲಿ ಎಸ್‌ಯುವಿಯನ್ನಾಗಿ ಪರವರ್ತಿಸಿ ಪರಿಚಯಿಸಿದೆ.
ಭಾರತದಲ್ಲಂತೂ ಸದ್ಯ ಎಸ್‌ಯುವಿಗಳಿಗೇ ಬೇಡಿಕೆ. ಲ್ಯಾಂಡ್ ಕ್ರೂಸರ್ ಹಾಗೂ ಫಾರ್ಚೂನರ್‌ಗಳಂತ ದುಬಾರಿ ಬೆಲೆಯ ಎಸ್‌ಯವಿಗಳನ್ನು ಹೊಂದಿರುವ ಟೊಯೊಟಾ, ಮಧ್ಯಮ ವರ್ಗದವರ ಬೇಡಿಕೆಗೆ ಅನುಗುಣವಾಗಿ ಮಾರುತಿ ಜತೆಗೂಡಿ ಅರ್ಬನ್ ಕ್ರೂಸರ್, ಹೈರೈಡರ್‌ನಂತ ಕಾರುಗಳನ್ನು ಪರಿಚಯಿಸಿತು. ಇದೀಗ ಮೇಲ್ಮಧ್ಯಮವರ್ಗದವರಿಗಾಗಿ ಕೊರೊಲಾ ಕ್ರಾಸ್ ಪರಿಚಯಿಸಿದೆ.
ಅದರಲ್ಲೂ ಇತ್ತೀಚೆಗೆ ಬಿಡುಗಡೆ ಮಾಡಿದ ಜಿಆರ್ ಸ್ಪೋರ್ಟ್ ವೇರಿಯಂಟ್ ಯುವ ಮನಸ್ಸುಗಳನ್ನು ಸೆಳೆಯುವಂತಿದೆ. 19 ಇಂಚಿನ ಕಪ್ಪು ಬಣ್ಣದ ಅಲಾಯ್ ವೀಲ್‌ಗಳು, ಮುಂಭಾಗದ ವಿಶೇಷ ಗ್ರಿಲ್ ಹೆಚ್ಚು ಆಕ್ರಮಣಶಾಲಿ ರೂಪವನ್ನು ನೀಡಿದೆ. ಬೂದು ಬಣ್ಣದ ಬೈ ಟೋನ್ ಬಣ್ಣವು ಕಾರಿನ ವಿಲಾಸಿ ರೂಪವನ್ನು ಇನ್ನಷ್ಟು ಹೆಚ್ಚಿಸಿದೆ. ಒಳಾಂಗಣದಲ್ಲಿ ಆಸನಗಳಿಗೆ ವಿಶೇಷ ಬಗೆಯ BRIN・NAUB ಎಂಬ ಪದಾರ್ಥವನ್ನು ಬಳಸಿದೆ. ಕೆಂಪು ಬಣ್ಣದ ಹೊಲಿಗೆ ಮತ್ತು ಜಿಆರ್ ಲೋಗೊ ಇದ್ದು, ಹೆಚ್ಚು ಗ್ರ್ಯಾಂಡ್ ಆಗಿ ಕಾಣಿಸುತ್ತಿದೆ.

ಹೊಸ ವಿನ್ಯಾಸ
ಜಿಆರ್ ಸ್ಪೋರ್ಟ್ ಮಾದರಿಯ ಕೊರೊಲಾ ಕ್ರಾಸ್ ಸಾಕಷ್ಟು ಹೊಸ ಸೌಕರ್ಯಗಳನ್ನು ಕಂಡಿದೆ. ಸಸ್ಪೆನ್ಶನ್ ಅನ್ನು 10 ಮಿ.ಮೀ.ಯಷ್ಟು ತಗ್ಗಿಸಲಾಗಿದೆ. ಇದರಿಂದ ಕಾರಿನ ಗುರುತ್ವಾಕರ್ಷಣೆಯು ಕಾರಿನ ಮಧ್ಯಭಾಗದಲ್ಲಿ ಕೇಂದ್ರೀಕೃತವಾಗಿದ್ದು, ಕಾರಿನ ಹಿಡಿತ ಉತ್ತಮವಾಗಿದೆ. ಸ್ಟಿಯರಿಂಗ್ ಉತ್ತಮಪಡಿಸಲಾಗಿದ್ದು, ಹಿಡಿತ ಉತ್ತಮವಾಗಿದೆ. ಜತೆಗೆ ಪೆಡಲ್ ಶಿಫ್ಟ್ ಮ್ಯಾನುಯಲ್ ಗೇರ್ ಬದಲಾಗಿದೆ. ಇದು ಚಾಲನಾ ಅನುಭೂತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಸ್ಪೋರ್ಟ್‌ನಿಂದಾಗಿ ಕಾರಿನ ಆಕ್ಸಲರೇಟ್ ಮತ್ತು ಡಿಆಕ್ಸಲರೇಟ್ ತ್ವರಿತವಾಗಿದೆ. ಡಿಆಕ್ಸಲರೇಟ್ ಸಂದರ್ಭದಲ್ಲಿ ಬ್ರೇಕಿಂಗ್ ಇನ್ನಷ್ಟು ಭಿಗಿಯಾಗಿದೆ. ಎಲ್ಲಾ ಚಕ್ರಗಳೂ ಚಲಿಸುವಂತೆ ಆಲ್ ವೀಲ್ ಡ್ರೈವ್ ನೀಡಿರುವುದು ಕಾರಿನ ಕಾರ್ಯಕ್ಷಮತೆ ಹೆಚ್ಚಿಸಿದೆ.

ಆಕರ್ಷಕ ಒಳಾಂಗಣ
ಒಳಾಂಗಣದಲ್ಲಿ ಕ್ರಾಸ್ ಜಿಆರ್ ಸ್ಪೋರ್ಟ್ ಹಲವು ಹೊಸ ಸೌಕರ್ಯಗಳನ್ನು ಅಳವಡಿಸಿಕೊಂಡಿದೆ. ಸೆಂಟರ್ ಕನ್ಸೋಲ್ ಹೊಸ ಸಂಪೂರ್ಣ ಬದಲಾಗಿದೆ. ಸ್ಲೈಡಿಂಗ್ ಸ್ಟೋರೇಜ್ ಬಾಕ್ಸ್ ನೀಡಲಾಗಿದೆ. ಕಪ್ ಹೋಲ್ಡರ್ ಜಾಗವನ್ನು ಬದಲಿಸಲಾಗಿದೆ. ಸ್ಮಾರ್ಟ್‌ಫೋನ್ ಇಡಲು ನಿರ್ದಿಷ್ಟ ಜಾಗ ನೀಡಲಾಗಿದೆ. ವೈರ್‌ಲೆಸ್ ಚಾರ್ಜರ್, ಆ್ಯಂಡ್ರಾಯ್ಡ್ ಕನೆಕ್ಟಿವಿಟಿ ಒಂದೂವರೆ ಪಟ್ಟು ವೇಗವಾಗಿದೆ. ಆ್ಯಪಲ್ ಕಾರ್‌ಪ್ಲೇ ಕಾರ್ಯಕ್ಷಮತೆಯೂ ಉತ್ತಮವಾಗಿದೆ. 10.5 ಇಂಚಿನ ಎಚ್‌ಡಿ ಟನ್‌ಸ್ಕ್ರೀನ್ ಹೊಂದಿರುವ ಇನ್ಫೊಟೈನ್ಮೆಂಟ್ ಸ್ಕ್ರೀನ್ ನೀಡಲಾಗಿದೆ. 12.3 ಇಂಚಿನ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರಿಮೆಂಟ್ ಕ್ಲಸ್ಟರ್ ನೀಡಲಾಗಿದೆ.

ಎಂಜಿನ್ ಕಾರ್ಯಕ್ಷಮತೆ
ಕೊರೊಲಾ ಕ್ರಾಸ್ ಜಿಆರ್ ಸ್ಪೋರ್ಟ್ ಕಾರಿನಲ್ಲಿ ಎರಡು ಪವರ್‌ಟ್ರೈನ್ ಆಯ್ಕೆಗಳಿವೆ. ಹೈಬ್ರೀಡ್ 140 ಮತ್ತು ಶಕ್ತಿಶಾಲಿಯ ಹೈಬ್ರೀಡ್ 200 ನೀಡಲಾಗಿದೆ. 5ನೇ ತಲೆಮಾರಿನ ಹೈಬ್ರೀಡ್ ತಂತ್ರಜ್ಞಾನ ಇದರದ್ದಾಗಿದೆ. ಇದರಿಂದ ಹೆಚ್ಚಿನ ಇಂಧನ ಕಾರ್ಯಕ್ಷಮತೆ ಇದರದ್ದಾಗಿದೆ. ಎಡಬ್ಲೂಡಿ–ಐ ಆವೃತ್ತಿಯನ್ನು ಇದು ಹೊಂದಿದೆ.

ಸುರಕ್ಷತೆ
ಟೊಯೊಟಾ ಕೊರೊಲಾ ಕ್ರಾಸ್ ಜಿಆರ್ ಸ್ಪೋರ್ಟ್ ಎಸ್‌ಯುವಿ ಕಾರು ಟಿ–ಮೇಟ್ ಸುರಕ್ಷತಾ ಸಾಧನ ಹೊಂದಿದೆ. ಇದರೊಂದಿಗೆ 3ನೇ ತಲೆಮಾರಿನ ಟೊಯೊಟಾ ಸೇಫ್ಟಿ ಸೆನ್ಸ್ ಸಿಸ್ಟಂ ಇದರಲ್ಲಿದೆ. ಇದರಿಂದ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟೆನ್ಸ್, ಡಿಕ್ಕಿ ತಪ್ಪಿಸುವ ಎಚ್ಚರಿಕೆ, ಓವರ್ ದಿ ಏರ್ ತಂತ್ರಾಂಶ ಹೊಂದಿದೆ.
ಹಲವು ಹೊಸ ಸೌಕರ್ಯಗಳೊಂದಿಗೆ ಜಿಆರ್ ಸ್ಪೋರ್ಟ್ ಭಾರತದಲ್ಲಿ ಗ್ರಾಹಕರ ಸೆಳೆಯಲು ಸಿದ್ಧಗೊಂಡಿದೆ. ಟೊಯೊಟಾ ಕೊರೊಲಾ ಕ್ರಾಸ್ ಜಿಆರ್ ಸ್ಪೋರ್ಟ್ ಕಾರು ₹24 ಲಕ್ಷ ಬೆಲೆಯ ಆಸುಪಾಸಿನಲ್ಲಿ ಲಭ್ಯ ಎಂದೆನ್ನಲಾಗಿದೆ.