ಟಿಗ್ವಾನ್ ಆರ್–ಲೈನ್ ಅನ್ನು ಪರಿಚಯಿಸಿದ ಕೆಲವೇ ತಿಂಗಳುಗಳಲ್ಲಿ ಜರ್ಮನಿಯ ಫೋಕ್ಸ್‌ವ್ಯಾಗನ್ ಕಂಪನಿಯು ಮೂರು ಸಾಲಿನ ಆಸನಗಳುಳ್ಳ ಎಸ್‌ಯುವಿ ಪರಿಚಯಿಸಲು ಸಿದ್ಧತೆ ನಡೆಸಿದೆ.
ಟೈರನ್ ಎಂಬ ಹೆಸರಿನ ಈ ನೂತನ ಎಸ್‌ಯುವಿ ಮೂರು ಸಾಲಿನ ಕಾರಾಗಿದೆ. ಸದ್ಯ ಪರೀಕ್ಷಾರ್ಥ ಓಡಾಟ ನಡೆಸುತ್ತಿರುವ ಟೈರನ್ ಅಲ್ಲಲ್ಲಿ ವಾಹನ ಪ್ರಿಯರ ಕಣ್ಣಿಗೆ ಬಿದ್ದು, ಕುತೂಹಲ ಹುಟ್ಟಿಸಿದೆ.
ಟೈರನ್ ಎಸ್‌ಯುವಿಯು ಎಂಕ್ಯೂಬಿ ಇವಿಒ ಪ್ಲಾಟ್‌ಫಾರ್ಮ್ ಆಧಾರಿತ ಕಾರ್ ಆಗಿದೆ. 5 ಆಸನಗಳ ಟಿಗ್ವಾನ್ ಮತ್ತು ಸ್ಕೋಡಾದ ಕೋಡಿಯಾಕ್‌ನಂತೆಯೇ. ಸ್ಪೋರ್ಟಿ ನೋಟ, ಮುಂಭಾಗದಲ್ಲಿ ಕಪ್ಪು ಬಣ್ಣದ ದೊಡ್ಡ ವೆಂಟ್‌ಗಳು, ಎರಡು ಬಣ್ಣಗಳ ಅಲಾಯ್ ವೀಲ್‌ಗಳು ಕಂಡುಬಂದಿವೆ. ಟ್ವಿನ್ ಪಾಡ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳಿವೆ. ಜತೆಗೆ ಎಲ್‌ಇಡಿ ಡಿಆರ್‌ಎಲ್ ಮತ್ತು ಎಲ್ಇಡಿ ಟೇಲ್ ಲೈಟ್‌ಗಳಿವೆ.

ಟೈರನ್ ಸದ್ಯ ಸ್ಕೋಡಾ ಕೋಡಿಯಾಕ್ ಮತ್ತು ಟೊಯೊಟಾ ಫಾರ್ಚ್ಯೂನರ್ ಅನ್ನೇ ಗುರಿಯಾಗಿಸಿ ಮಾರುಕಟ್ಟೆಗಳಿಯುತ್ತಿದೆ. ಮೂರು ಸ್ಪೋಕ್‌ನ ಸ್ಟಿಯರಿಂಗ್ ವೀಲ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಪರದೆಗಳಿವೆ. 360 ಡಿಗ್ರಿ ಕ್ಯಾಮೆರಾ, ಆಟೊಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಹವಾನಿಯಂತ್ರಿತ ಸಾಧನ ಸೇರಿದಂತೆ ಇಂದಿನ ಕಾಲಮಾನಕ್ಕೆ ಅಗತ್ಯ ಸೌಕರ್ಯಗಳನ್ನು ನೀಡಲಾಗಿದೆ.
ಟೈರನ್‌ನಲ್ಲಿ 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಇದ್ದು, 7 ಸ್ಪೀಡ್ ಡುಯಲ್ ಕ್ಲಚ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು ಫೋರ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಅಳವಡಿಸಿರಿವುದು ಕಂಡುಬಂದಿದೆ. 2025ರ ಅಂತ್ಯದ ಹೊತ್ತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.