ಬ್ರಿಟನ್ನಲ್ಲಿ ಹೊಸ ಯೋಜನೆ ಜಾರಿ; ಪ್ರತಿವರ್ಷ ಅಧಿಕೃತ ಸರ್ವಿಸ್ ಮಾಡಿಸಿದರೆ ಹೆಚ್ಚುವರಿ ವಾರಂಟಿ, 70 ಸಾವಿರ ಮೈಲಿ ಓಡಿದರೂ ಸೌಲಭ್ಯ ಅಂತ್ಯ
ಬೈಕ್ ಖರೀದಿಸುವಾಗ ಅದರ ಎಂಜಿನ್, ವಿನ್ಯಾಸ, ಮೈಲೇಜ್ ಜೊತೆಗೆ ವಾರಂಟಿಗೂ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದರಲ್ಲೂ ದೀರ್ಘಕಾಲದ ವಾರಂಟಿ ಸಿಕ್ಕರೆ ನಿರ್ವಹಣಾ ವೆಚ್ಚದ ಆತಂಕ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ರಾಯಲ್ ಎನ್ಫೀಲ್ಡ್ ಮಹತ್ವದ ಹೆಜ್ಜೆಯಿಟ್ಟಿದೆ. ತನ್ನ ಬೈಕ್ಗಳಿಗೆ ಬರೋಬ್ಬರಿ 10 ವರ್ಷಗಳವರೆಗೆ ವಾರಂಟಿ ನೀಡುವ ಹೊಸ ಯೋಜನೆಯನ್ನು ಬ್ರಿಟನ್ನಲ್ಲಿ ಜಾರಿಗೆ ತಂದಿದೆ. ವಿಶೇಷವೆಂದರೆ ಈ ಸೌಲಭ್ಯ ಹೊಸದಾಗಿ ಬೈಕ್ ಖರೀದಿಸುವವರಿಗೆ ಮಾತ್ರವಲ್ಲ, ಈಗಾಗಲೇ ಬೈಕ್ ಹೊಂದಿರುವ ಅರ್ಹ ಗ್ರಾಹಕರಿಗೂ ಲಭ್ಯವಿದೆ.
ರಾಯಲ್ ಎನ್ಫೀಲ್ಡ್ ಯುಕೆ (Royal Enfield UK) ನವೆಂಬರ್ 20ರಿಂದ ‘ಸರ್ವಿಸ್ ಆಕ್ಟಿವೇಟೆಡ್ ವಾರಂಟಿ’ (Service Activated Warranty) ಎಂಬ ಯೋಜನೆಯನ್ನು ಆರಂಭಿಸಿದೆ. ಇದರ ಅಡಿಯಲ್ಲಿ ಗರಿಷ್ಠ 10 ವರ್ಷ ಅಥವಾ 70,000 ಮೈಲಿ (ಸುಮಾರು 1.12 ಲಕ್ಷ ಕಿ.ಮೀ.) ದೂರದವರೆಗೆ ವಾರಂಟಿ ಸೌಲಭ್ಯ ದೊರೆಯಲಿದೆ. ಇವೆರಡರಲ್ಲಿ ಯಾವುದು ಮೊದಲು ಪೂರ್ಣಗೊಳ್ಳುತ್ತದೆಯೋ ಅಲ್ಲಿಗೆ ವಾರಂಟಿ ಮುಕ್ತಾಯವಾಗುತ್ತದೆ.
ಪ್ರತಿವರ್ಷ ಸರ್ವಿಸ್ ಮಾಡಿಸಿದರೆ ವಾರಂಟಿ ವಿಸ್ತರಣೆ
ಸಾಮಾನ್ಯವಾಗಿ ರಾಯಲ್ ಎನ್ಫೀಲ್ಡ್ ಬ್ರಿಟನ್ನಲ್ಲಿ ತನ್ನ ಬೈಕ್ಗಳಿಗೆ ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ನೀಡುತ್ತದೆ. ಹೊಸ ಯೋಜನೆಯು ಈ ಮೂರು ವರ್ಷಗಳ ಅವಧಿಗೆ ಹೆಚ್ಚುವರಿಯಾಗಿ ಏಳು ವರ್ಷಗಳವರೆಗೆ ವಾರಂಟಿ ವಿಸ್ತರಿಸುವ ಅವಕಾಶ ಕಲ್ಪಿಸುತ್ತದೆ. ಆದರೆ ಇದಕ್ಕಾಗಿ ಮಾಲೀಕರು ಪ್ರತಿವರ್ಷ ರಾಯಲ್ ಎನ್ಫೀಲ್ಡ್ನ ಅಧಿಕೃತ ಡೀಲರ್ ಅಥವಾ ಮಾನ್ಯತೆ ಪಡೆದ ಸರ್ವಿಸ್ ಕೇಂದ್ರದಲ್ಲಿ ನಿಗದಿತ ನಿರ್ವಹಣೆ ಮಾಡಿಸಬೇಕು.
ಪ್ರತಿ ವರ್ಷ ಸರ್ವಿಸ್ ಪೂರ್ಣಗೊಳಿಸಿದ ಬಳಿಕ ಮುಂದಿನ 12 ತಿಂಗಳ ವಾರಂಟಿ ಸಕ್ರಿಯಗೊಳ್ಳುತ್ತದೆ. ಹೀಗೆ ಸತತವಾಗಿ ನಿಗದಿತ ಸರ್ವಿಸ್ ಮಾಡಿಸಿದರೆ ಒಟ್ಟು 10 ವರ್ಷಗಳವರೆಗೆ ವಾರಂಟಿ ಪಡೆಯಬಹುದು. ಇದಕ್ಕೆ ಪ್ರತ್ಯೇಕವಾಗಿ ವಾರಂಟಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಅಂದರೆ ಇದು ಉಚಿತ ಸೌಲಭ್ಯವಾದರೂ ಅಧಿಕೃತ ಸರ್ವಿಸ್ ಕೇಂದ್ರಕ್ಕೆ ಪ್ರತಿವರ್ಷ ಭೇಟಿ ನೀಡುವುದು ಕಡ್ಡಾಯ.
ಹಳೆಯ ಬೈಕ್ ಮಾಲೀಕರಿಗೂ ಅವಕಾಶ
ಈ ಯೋಜನೆಯ ವಿಶೇಷತೆಯೆಂದರೆ ಈಗಾಗಲೇ ರಾಯಲ್ ಎನ್ಫೀಲ್ಡ್ ಬೈಕ್ ಹೊಂದಿರುವವರಿಗೂ ಅವಕಾಶವಿದೆ. ಬೈಕ್ ನಿಗದಿತ ವಾರಂಟಿ ಅವಧಿಯೊಳಗಿರಬೇಕು ಮತ್ತು ವಯಸ್ಸು ಹಾಗೂ ಓಡಿಸಿರುವ ದೂರಕ್ಕೆ ಸಂಬಂಧಿಸಿದ ಅರ್ಹತಾ ನಿಯಮಗಳನ್ನು ಪೂರೈಸಬೇಕು. ಈಗಾಗಲೇ ಬೇರೆ ಗ್ಯಾರೇಜ್ಗಳಲ್ಲಿ ಸರ್ವಿಸ್ ಮಾಡಿಸಿರುವ ಗ್ರಾಹಕರಿಗೂ ಅಧಿಕೃತ ಸರ್ವಿಸ್ ಕೇಂದ್ರದ ಮೂಲಕ ಯೋಜನೆಗೆ ಮರಳುವ ಅವಕಾಶವಿದೆ.
ಇದಕ್ಕಾಗಿ ಅಧಿಕೃತ ಕೇಂದ್ರದಲ್ಲಿ ಸರ್ವಿಸ್ ಮತ್ತು ಉಚಿತ ವಾಹನ ಆರೋಗ್ಯ ತಪಾಸಣೆ (Health Check) ಮಾಡಿಸಬೇಕು. ಬೈಕ್ನಲ್ಲಿ ದುರಸ್ತಿ ಅಗತ್ಯವಿದ್ದರೆ ಅದನ್ನು ಮಾಲೀಕರೇ ವೆಚ್ಚ ಭರಿಸಿ ಸರಿಪಡಿಸಬೇಕು. ವಾರಂಟಿ ಸಕ್ರಿಯಗೊಂಡ ನಂತರ ಮೊದಲ 30 ದಿನಗಳಲ್ಲಿ ಸಲ್ಲಿಸುವ ಕ್ಲೇಮ್ಗಳಿಗೆ ನಿರ್ಬಂಧವಿದೆ.
ಯಾವ ಬೈಕ್ಗಳಿಗೆ ಅನ್ವಯ?
ರಾಯಲ್ ಎನ್ಫೀಲ್ಡ್ನ ಹೊಸ ಮತ್ತು ಇತ್ತೀಚಿನ ಎಂಜಿನ್ ಪ್ಲಾಟ್ಫಾರ್ಮ್ಗಳ ಬೈಕ್ಗಳಿಗೆ ಈ ಯೋಜನೆ ಅನ್ವಯಿಸುತ್ತದೆ. 350 ಸಿಸಿ ಜೆ-ಸೀರೀಸ್, 450 ಸಿಸಿ ಶೆರ್ಪಾ ಎಂಜಿನ್ ಮತ್ತು 650 ಸಿಸಿ ಟ್ವಿನ್ ಎಂಜಿನ್ ಹೊಂದಿರುವ ಮಾದರಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಹೊಸ 750 ಸಿಸಿ ಎಂಜಿನ್ ಪ್ಲಾಟ್ಫಾರ್ಮ್ ಕೂಡ ಈ ಯೋಜನೆಯಲ್ಲಿದೆ.
ಆದರೆ ಎಲ್ಲ ಬೈಕ್ಗಳಿಗೂ ಈ ಸೌಲಭ್ಯವಿಲ್ಲ. ಹಳೆಯ ಯುಸಿಇ (UCE) 500 ಸಿಸಿ ಎಂಜಿನ್ ಹೊಂದಿರುವ ಕ್ಲಾಸಿಕ್ 500, ಬುಲೆಟ್ 500, ಬುಲೆಟ್ ಎಲೆಕ್ಟ್ರಾ 500 ಹಾಗೂ 411 ಸಿಸಿ ಎಂಜಿನ್ ಹೊಂದಿರುವ ಹಿಮಾಲಯನ್ 411 ಮತ್ತು ಸ್ಕ್ರಾಮ್ 411 ಮಾದರಿಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ.
ಯಾವೆಲ್ಲ ಭಾಗಗಳಿಗೆ ವಾರಂಟಿ?
ವಾರಂಟಿಯು ಉತ್ಪಾದನಾ ದೋಷಗಳಿಂದ ಉಂಟಾಗುವ ಯಾಂತ್ರಿಕ ಮತ್ತು ಎಲೆಕ್ಟ್ರಿಕಲ್ ಬಿಡಿಭಾಗಗಳ ಸಮಸ್ಯೆಗಳಿಗೆ ಅನ್ವಯಿಸುತ್ತದೆ. ಆದರೆ ಬ್ರೇಕ್ ಪ್ಯಾಡ್, ಚೈನ್, ಟೈರ್, ಫಿಲ್ಟರ್ಗಳಂತಹ ಸಹಜ ಸವಕಳಿಗೆ ಒಳಗಾಗುವ ಬಿಡಿಭಾಗಗಳು ಇದರ ವ್ಯಾಪ್ತಿಗೆ ಬರುವುದಿಲ್ಲ. ಬಾಡಿವರ್ಕ್, ಮೊದಲೇ ಇದ್ದ ದೋಷಗಳು, ಅಪಘಾತ ಅಥವಾ ತಪ್ಪಾದ ಬಳಕೆಯಿಂದ ಉಂಟಾಗುವ ಹಾನಿಗೂ ವಾರಂಟಿ ಅನ್ವಯಿಸುವುದಿಲ್ಲ.
ಬೈಕ್ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದರೂ ವಾರಂಟಿಯನ್ನು ವರ್ಗಾಯಿಸಬಹುದು. ಆದರೆ ಮಾರಾಟವಾದ 30 ದಿನಗಳೊಳಗೆ ಅಧಿಕೃತ ಡೀಲರ್ಗೆ ಮಾಹಿತಿ ನೀಡಬೇಕು. ಈ ಮೂಲಕ ಬೈಕ್ನ ಮರುಮಾರಾಟ ಮೌಲ್ಯಕ್ಕೂ ನೆರವಾಗಲಿದೆ ಎಂಬುದು ಕಂಪನಿಯ ನಿರೀಕ್ಷೆ.
ಭಾರತಕ್ಕೂ ಬರಲಿದೆಯೇ 10 ವರ್ಷಗಳ ವಾರಂಟಿ?
ಈಗಿರುವ ಪ್ರಮುಖ ಪ್ರಶ್ನೆ ಭಾರತದಲ್ಲಿನ ಗ್ರಾಹಕರಿಗೂ ಇದೇ ಸೌಲಭ್ಯ ಸಿಗಲಿದೆಯೇ ಎಂಬುದು. ಸದ್ಯಕ್ಕೆ ರಾಯಲ್ ಎನ್ಫೀಲ್ಡ್ ಈ ಯೋಜನೆಯನ್ನು ಬ್ರಿಟನ್ಗೆ ಮಾತ್ರ ಸೀಮಿತಗೊಳಿಸಿದೆ. ಭಾರತದಲ್ಲಿ 10 ವರ್ಷಗಳ ವಾರಂಟಿ ನೀಡುವ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ಗಳಿಗೆ ಅನ್ವಯಿಸುವ ವಾರಂಟಿ ಮತ್ತು ವಿಸ್ತೃತ ವಾರಂಟಿ ಯೋಜನೆಗಳು ಪ್ರತ್ಯೇಕವಾಗಿವೆ.
ಬ್ರಿಟನ್ನಲ್ಲಿ ಈ ಯೋಜನೆ ಜಾರಿಗೆ ತರುವ ಮೂಲಕ ಕಂಪನಿಯು ತನ್ನ ಬೈಕ್ಗಳ ದೀರ್ಘಕಾಲೀನ ವಿಶ್ವಾಸಾರ್ಹತೆಯ ಬಗ್ಗೆ ನಂಬಿಕೆ ವ್ಯಕ್ತಪಡಿಸಿದೆ. ಅದೇ ವೇಳೆ ಗ್ರಾಹಕರು ಅಧಿಕೃತ ಸರ್ವಿಸ್ ಜಾಲದೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆಯೂ ಮಾಡಿದೆ. ಭಾರತದಲ್ಲೂ ಇದೇ ರೀತಿಯ ಯೋಜನೆ ಜಾರಿಯಾದರೆ, ಲಕ್ಷಾಂತರ ರಾಯಲ್ ಎನ್ಫೀಲ್ಡ್ ಗ್ರಾಹಕರಿಗೆ ಅದು ದೊಡ್ಡ ಕೊಡುಗೆಯಾಗಬಹುದು.




