ಹೆಲ್ಮೆಟ್ ಎಂಬುದು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾತ್ರ ಬಳಕೆಯಾದರೆ ಏನು ಪ್ರಯೋಜನ. ಅದು ತಲೆಯ ಭಾಗವನ್ನು ರಕ್ಷಿಸುವಂತಿರಬೇಕು. ಅದು, ಆರಾಮದಾಯಕವಾಗಿರಬೇಕು. ಹಾಗಿದ್ದರೆ ಎಂಥ ಹೆಲ್ಮೆಟ್ ಖರೀದಿಸಬೇಕು. ಹಾಕುವ ಹೆಲ್ಮೆಟ್ಗೆ ಯಾವೆಲ್ಲಾ ಮಾನ್ಯತೆಗಳು ಇರಬೇಕು ಎಂಬುದರ ಮಾಹಿತಿ ಇಲ್ಲಿದೆ.
ಮೋಟಾರ್ಸೈಕಲ್ ಸವಾರರ ಸುರಕ್ಷತೆಗಾಗಿ ಹೆಲ್ಮೆಟ್ಗಳು ಅತ್ಯಂತ ಮುಖ್ಯ. ಆದರೆ ಹೆಲ್ಮೆಟ್ಗಳ ಗುಣಮಟ್ಟವನ್ನು ಅಳೆಯುವ ಹಲವು ಅಂತಾರಾಷ್ಟ್ರೀಯ ಪ್ರಮಾಣಪತ್ರಗಳು ಇವೆ. ಅವುಗಳ ವೈಶಿಷ್ಟ್ಯ, ಬಳಕೆ ಹಾಗೂ ಬೆಲೆ ಶ್ರೇಣಿಯನ್ನು ತಿಳಿದುಕೊಳ್ಳುವುದು ಅಗತ್ಯ.
ISI (ಭಾರತೀಯ ಮಾನ್ಯತೆ)
ಭಾರತದ ರಸ್ತೆಯಲ್ಲಿ ಐಎಸ್ಐ ಮಾನ್ಯತೆ ಇರುವ ಹೆಲ್ಮೆಟ್ ಧರಿಸಬೇಕಾದ್ದು ಕಡ್ಡಾಯ. ಸಾರಿಗೆ ಇಲಾಖೆ ನಿಯಮವೂ ಅದನ್ನೇ ಹೇಳುತ್ತದೆ. ಸಾಮಾನ್ಯ ರಸ್ತೆ ಸವಾರಿಗೆ ಹೇಳಿ ಮಾಡಿಸಿದಂತಿರುವ ಈ ಹೆಲ್ಮೆಟ್ ಸಣ್ಣ ಅಪಘಾತ ಪರೀಕ್ಷೆಯಲ್ಲಿ ಸೈ ಎನಿಸಿಕೊಂಡಿದೆ. ಇದರ ಬೆಲೆ ₹1 ಸಾವಿರದಿಂದ ₹4,500ರವರೆಗೆ ಲಭ್ಯ.
ಅಮೆರಿಕದ DOT (ಸಾರಿಗೆ ಇಲಾಖೆ ಮಾನ್ಯತೆ)
ಅಮೆರಿಕದ ಸಾರಿಗೆ ಇಲಾಖೆಯ ಮಾನ್ಯತೆ ಪಡೆದಿರುವ ಈ ಹೆಲ್ಮೆಟ್ ನಗರ ಹಾಗೂ ಹೊರವಲಯಗಳಲ್ಲೂ ಸವಾರಿ ಮಾಡಲು ಸೂಕ್ತ ಎಂದು ಮಾನ್ಯತೆ ಪಡೆದಿದೆ. ರೋಟೇಷನಲ್ ಟೆಸ್ಟಿಂಗ್ ಕೂಡಾ ಈ ಮಾದರಿಯ ಹೆಲ್ಮೆಟ್ ಮೇಲೆ ನಡೆದಿದ್ದು, ಯಶಸ್ವಿಯಾಗಿದೆ. ಇದರ ಬೆಲೆ ₹4,500 ರಿಂದ ₹25,000.
ECE (ಯುರೋಪ್ನ ಆರ್ಥಿಕ ಆಯೋಗ)
ಸುಮಾರು 50 ರಾಷ್ಟ್ರಗಳಲ್ಲಿ ಈ ಮಾನ್ಯತೆ ಪಡೆದ ಹೆಲ್ಮೆಟ್ ಬಳಕೆಗೆ ಅನುಮತಿ ಲಭಿಸಿದೆ. ಹೆದ್ದಾರಿ ಸವಾರಿ ಹೇಳಿ ಮಾಡಿಸಿದ ಈ ಹೆಲ್ಮೆಟ್ ಅಪಘಾತ ಮತ್ತು ರೊಟೇಷನಲ್ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಇದರ ಬೆಲೆ ₹6,000 – ₹60,000ರಷ್ಟಿದೆ. ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಅತ್ಯಂತ ಸೂಕ್ತವಾದ ಪ್ರಮಾಣಪತ್ರ.
SNELL
ಅಮೆರಿಕ ಮೂಲದ ಸ್ನೆಲ್ ತನ್ನ ಗುಣಮಟ್ಟಕ್ಕಾಗಿ ಜಾಗತಿಕ ಮಟ್ಟದಲ್ಲಿ ಸಾಷ್ಟು ಪ್ರಸಿದ್ಧಿ ಪಡೆದ ಹೆಲ್ಮೆಟ್. ಟ್ರ್ಯಾಕ್ ರೇಸಿಂಗ್ನಲ್ಲಿ ಇದಕ್ಕೆ ಎಲ್ಲಿಲ್ಲದ ಮಾನ್ಯತೆ. ಶ್ರೇಷ್ಠ ಗುಣಮಟ್ಟದ ಈ ಹೆಲ್ಮೆಟ್ ಅಪಘಾತ ಮತ್ತು ರೊಟೇಷನ್ ಪರೀಕ್ಷೆಯಲ್ಲಿ ಇದಕ್ಕೆ ಫುಲ್ ಮಾರ್ಕ್ಸ್. ಇದರ ಬೆಲೆ ₹45,000 – ₹1,20,000ವರೆಗೂ ಇದೆ.
ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಪಾಸು ಮಾಡುವ ಹೆಲ್ಮೆಟ್ಗಳಿಗೆ ಮಾತ್ರ ಸ್ನೆಲ್ ಪ್ರಮಾಣಪತ್ರ ದೊರೆಯುತ್ತದೆ ಎಂಬುದನ್ನೂ ಗಮದಲ್ಲಿಟ್ಟುಕೊಳ್ಳಬೇಕು.
FIM (ಅಂತರರಾಷ್ಟ್ರೀಯ ಮೋಟಾರ್ಸೈಕಲಿಸಮ್ ಒಕ್ಕೂಟ)
ಜಾಗತಿಕ ರೇಸಿಂಗ್ ಟ್ರ್ಯಾಕ್ನಲ್ಲಿ ಎಫ್ಐಎಂ ಹೆಲ್ಮೆಟ್ನದ್ದು ದೊಡ್ಡ ಹೆಸರು. ವೃತ್ತಿಪರ ರೇಸಿಂಗ್ ಟ್ರ್ಯಾಕ್ನಲ್ಲಿ ಎಫ್ಐಎಂ ಹೆಲ್ಮೆಟ್ ಧರಿಸದವರಿಲ್ಲ. ಅಪಘಾತ ಮತ್ತು ರೊಟೇಷನ್ ಪರೀಕ್ಷೆಯಲ್ಲಿ ಇದರ ಫಲಿತಾಂಶ ದೊಡ್ಡದು. ಈ ಹೆಲ್ಮೆಟ್ ಬೆಲೆ ₹45,000 – ₹1,00,000. ಮೊಟೊಜಿಪಿ ಮುಂತಾದ ಅಂತರರಾಷ್ಟ್ರೀಯ ರೇಸ್ಗಳಲ್ಲಿ ಇದರ ಬಳಕೆ ಕಡ್ಡಾಯ ಎನಿಸುವಷ್ಟರ ಮಟ್ಟಿಗೆ ಇದು ಜನಪ್ರಿಯ.
ಹೀಗೆ ಆಯಾ ರಸ್ತೆ ಮತ್ತು ಉದ್ದೇಶಕ್ಕೆ ಅನುಗುಣವಾಗಿ ಹೆಲ್ಮೆಟ್ಗಳ ಆಯ್ಕೆ ಮಾಡಿಕೊಳ್ಳಬೇಕು. ಭಾರತದ ರಸ್ತೆಗಳಲ್ಲಿ ಐಎಸ್ಐ ಅಥವಾ ಇಸಿಇ ಪ್ರಮಾಣಪತ್ರ ಹೊಂದಿರುವ ಹೆಲ್ಮೆಟ್ ಆಯ್ಕೆ ಸೂಕ್ತ. ಅಂತರರಾಷ್ಟ್ರೀಯ ರಸ್ತೆಗಳಲ್ಲಿ ಇಸಿಇ ಹೆಚ್ಚು ಉಪಯುಕ್ತ. ರೇಸಿಂಗ್ ಸವಾರರಿಗೆ ಸ್ನೆಲ್ ಅಥವಾ ಎಫ್ಐಎಂ ಪ್ರಮಾಣಪತ್ರ ಹೊಂದಿರುವ ಹೆಲ್ಮೆಟ್ ಅತ್ಯುತ್ತಮ.
ಸುರಕ್ಷತೆಗಾಗಿ ಹೆಲ್ಮೆಟ್ ಆಯ್ಕೆ ಮಾಡುವಾಗ ಪ್ರಮಾಣಪತ್ರ ಹಾಗೂ ಗುಣಮಟ್ಟವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು.




