ಪ್ರಯಾಣಿಕರ ವಾಹನ ಅಂದರೆ ಕಾರುಗಳ ಮಾರಾಟವು ಭಾರತದಲ್ಲಿ ಬೆಳವಣಿಗೆಯ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಕಾರು ಖರೀದಿಸುವವರ ಆಸಕ್ತಿ ಹೆಚ್ಚಳವಾಗಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈವರ್ಷ ಶೇ 10.46ರಷ್ಟು ಕಾರುಗಳು ಹೆಚ್ಚು ಬಿಕರಿಯಾಗಿವೆ.
2025ರ ಫೆಬ್ರುವರಿಯಲ್ಲಿ 3.80 ಲಕ್ಷ ಕಾರುಗಳು ಮಾರಾಟವಾಗಿದ್ದವು. 2026ರ ಫೆಬ್ರುವರಿಯಲ್ಲಿ 4.20ಲಕ್ಷ ಕಾರುಗಳು ಮಾರಾಟವಾಗಿವೆ. ಜನವರಿಯಲ್ಲಿ 4.52 ಲಕ್ಷ ಕಾರುಗಳು ಮಾರಟವಾಗಿವೆ. ಇಲ್ಲಿ ಒಂದು ಅಂಶವನ್ನು ಗಮನಿಸುವುದು ಬಹಳಾ ಮುಖ್ಯ. 2025ರ ಹಾಗೂ 2026ರ ಜನವರಿಯನ್ನು ಹೋಲಿಸಿದರೆ ಕಾರು ಖರೀದಿ ಶೇ 7.09ರಷ್ಟು ಕುಸಿದಿದೆ.
ಈ ಅವಧಿಯಲ್ಲಿ ಮಾರುತಿ ಸುಜುಕಿ ಎಂದಿನಂತೆ ತನ್ನ ಮಾರುಕಟ್ಟೆ ಮುಂದಾಳತ್ವವನ್ನು ವಹಿಸಿಕೊಂಡಿದೆ. ಈ ಕಂಪನಿಯು 1.61 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ವರ್ಷದಿಂದ ವರ್ಷಕ್ಕೆ ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟ ಬೆಳವಣಿಗೆಯು ಶೇ 0.13ರಷ್ಟು ವೃದ್ಧಿ ಕಾಣುತ್ತಿದೆ.
ಭಾರತ ಮೂಲದ್ದೇ ಆದ ಟಾಟಾ ಮೋಟಾರ್ಸ್ ತನ್ನ ಎಸ್ಯುವಿ ಮತ್ತು ಇವಿ ಕಾರುಗಳ ವಿಭಾಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಶೇ 34ರಷ್ಟು ಮಾರಾಟವನ್ನು ಟಾಟಾ ಹೆಚ್ಚಿಸಿಕೊಂಡು ಮುನ್ನಡೆಯುತ್ತಿದೆ.
ಸ್ಕಾರ್ಪಿಯೊ ಮತ್ತು ಇತರ ಎಸ್ಯುವಿಗಳ ಬೇಡಿಕೆ ಮೂಲಕ ಮಹೀಂದ್ರಾ ಕೂಡಾ ತನ್ನ ಉತ್ಪನ್ನಗಳನ್ನು ವರ್ಷದಿಂದ ವರ್ಷಕ್ಕೆ ಶೇ 19ರಷ್ಟು ಹೆಚ್ಚಿಸಿಕೊಳ್ಳುತ್ತಿದೆ. 60 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ.
ಹ್ಯುಂಡೇ ಮೋಟಾರ್ ಇಂಡಿಯಾ ಕಂಪನಿಯು 52 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ. ಪ್ರತಿ ವರ್ಷ ಶೇ 10ರಷ್ಟು ವೃದ್ಧಿ ದಾಖಲಿಸಿದೆ.
ಟೊಯೊಟಾ ಮೋಟಾರ್ ಕೂಡಾ ತನ್ನ ಎಸ್ಯುವಿ ಮತ್ತು ಎಂಪಿವಿ ಮಾದರಿಗಳನ್ನು ಮಾರಾಟ ಮೂಲಕ ವರ್ಷದಿಂದ ವರ್ಷಕ್ಕೆ ಶೇ 16ರಷ್ಟು ಮಾರಾಟ ವೃದ್ಧಿ ಕಂಡಿದೆ.
ಕಿಯಾ ಮೋಟಾರ್ ಕೂಡಾ 27 ಸಾವಿರ ಕಾರುಗಳ ಮಾರಾಟ ಮಾಡಿದ್ದು, ಶೇ 10ರಷ್ಟು ವೃದ್ಧಿ ದಾಖಲಿಸಿದೆ. ಸಾನೆಟ್, ಸೆಲ್ಟೋಸ್ ಮತ್ತು ಕ್ಯಾರೆನ್ಸ್ಗಳ ಮಾರಾಟ ಮಾಡಿದೆ.
ಮತ್ತೊಂದೆಡೆ ಸ್ಕೋಡಾ ಆಟೊ ಇಂಡಿಯಾ ಕಂಪನಿಯು ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಸಾಧನೆ ಮಾಡಿದೆ. 6 ಸಾವಿರ ಕಾರುಗಳನ್ನು ಮಾರಾಟ ಮಾಡುವ ಮೂಲಕ ಶೇ 13ರಷ್ಟು ಬೆಳವಣಿಗೆ ದಾಖಲಿಸಿದೆ. ಎಂಜಿ ಮೋಟಾರ್ ಇಂಡಿಯಾ ಕಂಪನಿಯು 5 ಸಾವಿರ ಕಾರುಗಳನ್ನು ಮಾರಾಟ ಮಾಡಿ ಶೇ 23ರಷ್ಟು ಬೆಳವಣಿಗೆ ದಾಖಲಿಸಿದೆ. ರಿನೊ ಇಂಡಿಯಾ ಕಂಪನಿಯು 3 ಸಾವಿರ ಕಾರುಗಳನ್ನು ಮಾರಾಟ ಮಾಡಿ ಶೇ 30ರಷ್ಟು ವೃದ್ಧಿ ಕಂಡಿದೆ. ಸಿಟ್ರನ್ ಇಂಡಿಯಾ ಕಂಪನಿಯು ಮಾರಾಟ ಮಾಡಿದ್ದು 950 ಕಾರುಗಳೇ ಆದರೂ, ಅದರ ಬೆಳವಣಿಗೆಯ ಪ್ರಮಾಣ ಶೇ 254ರಷ್ಟು ಎಂಬುದು ಅಚ್ಚರಿಯಾದರೂ ಸತ್ಯ. ಹೋಂಡಾ ಮೋಟಾರ್ಸ್ ಕಂಪನಿಯು 5 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಅದರ ವೃದ್ಧಿ ಶೇ 0.23ರಷ್ಟು ಮಾತ್ರ.
ಮತ್ತೊಂದೆಡೆ ಫೋಕ್ಸ್ವ್ಯಾಗನ್ ಇಂಡಿಯಾ ಕಂಪನಿಯ ಕಾರುಗಳ ಮಾರಾಟ ಶೇ 15ರಷ್ಟು ಇಳಿಕೆ ಕಂಡಿದೆ. ನಿಸ್ಸಾನ್ ಇಂಡಿಯಾ ಮಾರಾಟವು ಶೇ 4ರಷ್ಟು ಮಾರಾಟ ದಾಖಲಿಸಿದೆ. ಜೀಪ್ ಇಂಡಿಯಾ ಕೂಡಾ ಕುಸಿತದ ಹಾದಿಯಲ್ಲಿ ಸಾಗುತ್ತಿದ್ದು, ಅದರ ಕಾರುಗಳ ಮಾರಾಟವು ಶೇ 14ರಷ್ಟು ಕುಸಿದಿದೆ.
ಸದ್ಯ ಭಾರತದಲ್ಲಿ ಎಸ್ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಇದರ ಬೇಡಿಕೆ ವೃದ್ಧಿಸುತ್ತಿದ್ದು, ಇನ್ನಷ್ಟು ಹೊಸ ಮಾದರಿಯ ಕಾರುಗಳು ರಸ್ತೆಗಿಳಿಯಲು ಸಜ್ಜಾಗಿವೆ.




