ಮಾರುತಿ ಸುಜುಕಿ ಕಾರಿ ತಯಾರಿಕಾ ಕಂಪನಿಯು ಎ30 ಎಥನಾಲ್ ಬ್ಲೆಂಡ್ ಬಳಸಬಹುದಾದ ಇ100 ಫೆಕ್ಸ್–ಫ್ಯುಯೆಲ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ಜೂನ್ 5ರಂದು ವಿಶ್ವ ಪರಿಸರ ದಿನದ ಕಾರ್ಯಕ್ರಮದಲ್ಲಿ ಈ ಕಾರು ಅನಾವರಣಗೊಳ್ಳಲಿದೆ. ಪೆಟ್ರೋಲ್, ಡೀಸೆಲ್‌ನಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಥನಾಲ್ ಪ್ರಮುಖ ಪಾತ್ರವಹಿಸುತ್ತದೆ. ಇದು ಸ್ವದೇಶಿಯಾಗಿದ್ದು, ನವೀಕರಿಸಬಹುದಾದ ಇಂಧನ ಮೂಲವಾಗಿದೆ. ಕಬ್ಬು ಮತ್ತು ಜೋಳದಿಂದ ಎಥನಾಲ್ ಉತ್ಪಾದಿಸಬಹುದಾಗಿದ್ದು, ರೈತರಿಗೆ ಹೊಸ ಆರ್ಥಿಕ ಅವಕಾಶಗಳನ್ನು ನೀಡುತ್ತದೆ ಎಂದೂ ಅವರು ಹೇಳಿದ್ದಾರೆ.
ಭಾರತವು ಶೇ 87ರಷ್ಟು ಪೆಟ್ರೋಲ್, ಡೀಸೆಲ್ ಅನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಎಥನಾಲ್ ಬಳಕೆಯು ಈ ಹೊರೆಯನ್ನ ತಗ್ಗಿಸಲಿದೆ. ಪ್ರತಿ ಲೀಟರ್ ಎಥನಾಲ್‌ಗೆ ₹65 ಬೆಲೆ ಇದೆ. ಹಾಗೆಯೇ ಒಂದು ಲೀಟರ್‌ನಿಂದ ವಿದ್ಯುತ್ ಉತ್ಪಾದನೆ ವೆಚ್ಚವು ₹25ರಷ್ಟು ಆಗಲಿದೆ ಎಂಬುದು ಅವರ ಮಾತು.
ಘಡ್ಕರಿ ಅವರು ಹೇಳಿದ ಮಾತುಗಳು ಎಷ್ಟು ಪ್ರಾಯೋಗಕ ಎಂಬುದನ್ನು ಗಮನಿಸುವುದಾದರೆ, ಎಥನಾಲ್ ಪಂಪ್‌ಗಳ ಸಂಖ್ಯೆ ಭಾರತದಲ್ಲಿ ತೀರಾ ಕಡಿಮೆ ಇವೆ. ಹೀಗಾಗಿ ಲಭ್ಯತೆ ಕುರಿತು ಚಿಂತಿಸುವ ಅಗತ್ಯವಿದೆ. ಎಂಜಿನ್ ಬಾಳಿಕೆ ಕುರಿತೂ ಇನ್ನಷ್ಟು ಪರೀಕ್ಷೆಗಳು ನಡೆಯಬೇಕಿವೆ. ರೈತರ ಪಾಲ್ಗೊಳ್ಳುವಿಕೆ ಮತ್ತು ಸರ್ಕಾರದ ಬೆಂಬಲ ಅತ್ಯಗತ್ಯ.
ಬೆಂಗಳೂರಿನಂಥ ಮಹಾನಗರಗಳಲ್ಲಿ ಇವಿ ಮತ್ತು ಹೈಬ್ರಿಡ್ ವಾಹನಗಳು ಈಗಾಗಲೇ ಹೆಚ್ಚು ಅನುಕೂಲಕರ ಎಂದೆನಿಸಿಕೊಂಡಿವೆ. ಆದರೆ ಎಥನಾಲ್ ಪಂಪ್‌ಗಳು ಇನ್ನಷ್ಟೇ ಇಲ್ಲಿ ಸ್ಥಾಪನೆಯಾಗಬೇಕಿವೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಯೋಜನೆ ರೂಪಿಸುವುದೇ ಕಾದು ನೋಡಬೇಕಿದೆ.




