Mercedes Benz G-Class: ಒಂದು ಕಾರು ತಯಾರಾಗಲು ಬೇಕು 7,500 ಗಂಟೆ; ಏಕೆ..?

Mercedes Benz G class

ಜಗತ್ತಿನ ಬಹುತೇಕ ಸೇನೆಗಳ ಬೇಡಿಕೆ ಕಾರು ಮರ್ಸಿಡೀಸ್ ಬೆಂಜ್‌ ಜಿ–ಕ್ಲಾಸ್‌ ಅಥವಾ ಬಿಗ್‌ ಜಿ ಎಂದೂ ಇದನ್ನು ಕರೆಯಬಹುದು.

ಇರಾನ್‌ನ ದೊರೆಯಿಂದ ಸೇನೆಗಾಗಿ ಸಾವಿರಾರು ಜಿ–ಕ್ಲಾಸ್‌ಗಳಿಗೆ ಬೇಡಿಕೆ ಬಂದಾಗ ಆರಂಭಗೊಂಡ ಜಿ–ಕ್ಲಾಸ್‌ ಇಂದಿಗೂ ಅದೇ ಬೇಡಿಕೆ ಹೊಂದಿದೆ. ಸದೃಢ ದೇಹ, ಶಕ್ತಿಶಾಲಿ ಎಂಜಿನ್‌, ಆಯತಾಕಾರದ ಹೆಚ್ಚು ಆಡಂಬರವಿಲ್ಲದ ರಕ್ಷಾ ಕವಚ, ಒಳಭಾಗದಲ್ಲಿ ವಿಲಾಸಿ ಸೌಕರ್ಯಗಳು ಇಷ್ಟೆಲ್ಲಾ ಇರುವ ಜಿ–ಕ್ಲಾಸ್‌ ಹೇಗೆ ತಯಾರಾಗುತ್ತದೆ ಎಂಬುದನ್ನು ತಿಳಿದರೆ ಇದರ ಮೇಲಿನ ಮೋಹ ಇನ್ನಷ್ಟು ಹೆಚ್ಚಲಿದೆ.

ಬಿಗ್‌ ಜಿ ಎಂದೇ ಕರೆಯಲಾಗುವ ಮರ್ಸಿಡೀಸ್ ಬೆಂಜ್ ಜಿ–ಕ್ಲಾಸ್‌ ತಯಾರಾಗುವುದು ಆಸ್ಟ್ರಿಯಾದ ಗ್ರಾಸ್‌ನಲ್ಲಿ. 5.7 ಲಕ್ಷ ಚದರಡಿ ವಿಸ್ತೀರ್ಣದ ಈ ಬೃಹತ್ ತಯಾರಿಕಾ ಘಟಕದಲ್ಲಿ ಬೆಂಜ್‌ನ ಬೇರೆ ಯವುದೇ ಕಾರೂ ಸಿದ್ಧವಾಗುವುದಿಲ್ಲ. ಏಕೆಂದರೆ ಜಿ–ಕ್ಲಾಸ್‌ ತಯಾರಾಗುವುದು ಶ್ರಮವಹಿಸುವ ನೌಕರರ ಕೈಗಳಿಂದಲೇ ಹೊರತು, ಯಂತ್ರಗಳಿಂದಲ್ಲ. ಹೀಗಾಗಿಯೇ ಜಿ–ಕ್ಲಾಸ್‌ ಇಂದಿಗೂ ಅಧಿಕ ಬೇಡಿಕೆಯುಳ್ಳ ಕಾರು.

ಆಸ್ಟ್ರಿಯಾದ ಈ ಘಟಕದಲ್ಲಿ 1979ರಿಂದ ಜಿ–ಕ್ಲಾಸ್ ತಯಾರಾಗುತ್ತಿದೆ. ಐದು ಸಾವಿರ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರೂ ವಾರದಲ್ಲಿ 38.5 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಪ್ರತಿ ಗಂಟೆಗೆ 30 ಯೂರೊ ಗಳಿಸುತ್ತಾರೆ. ಹಾಗೆಯೇ ಒಂದು ಜಿ–ಕ್ಲಾಸ್ ತಯಾರಾಗಲು 7,500 ಗಂಟೆಗಳು ಬೇಕು. ಎಂದರೆ ನೀವು ಇದರ ಪ್ರಾಮುಖ್ಯತೆಯನ್ನು ಅರಿಯಬಹುದು.

ಹೀಗೆ ಪ್ರತಿ ವರ್ಷ ವಿವಿಧ ರಾಷ್ಟ್ರಗಳ ಸೇನೆಗಾಗಿಯೇ ಇಲ್ಲಿ ಐದು ಸಾವಿರ ಜಿ–ಕ್ಲಾಸ್‌ಗಳು ತಯಾರಾಗುತ್ತವೆ. ಅತ್ಯಧಿಕ ಗುಣಮಟ್ಟದ ಕಚ್ಚಾ ಸಾಮಗ್ರಿಗಳು, ನಿಖರವಾದ ಬೆಸುಗೆ, ಅತ್ಯಂತ ಜಾಗರೂಕತೆಯಿಂದ ಬಿಡಿಭಾಗಗಳ ಜೋಡಿಸುವ ನೌಕರರ ಕೌಶಲ ಮತ್ತು ಶ್ರದ್ಧೆ ಪ್ರತಿಯೊಂದು ಜಿ–ಕ್ಲಾಸ್‌ನ ಹಿಂದಿದೆ.

ಜಿ–ಕ್ಲಾಸ್‌ಗಾಗಿ ಅಲ್ಟ್ರಾ ಹೈಸ್ಟ್ರೆಂಥ್ ಸ್ಟೀಲ್ ಬಳಸಲಾಗುತ್ತಿದೆ. ಇದರೊಂದಿಗೆ ಅಲುಮಿನಿಯಂ ಅಲಾಯ್‌ ಬಳಕೆಯಾಗುತ್ತಿದೆ. ಇದರ ವಿನ್ಯಾಸ ಅಷ್ಟಾಗಿ ಸರಳವಾಗಿಲ್ಲ. ಹೀಗಾಗಿ ಯಂತ್ರಕ್ಕಿಂತ ತಯಾರಕರೇ ಇದರ ಜೋಡಣೆಗೆ ಬೆಸುಗೆ ಹಾಕಿ ಸಿದ್ಧಪಡಿಸಬೇಕು. ಇದು ಹೆಚ್ಚು ಕೈಹಿಡಿಯುವ ಕೆಲಸವಾದರೂ, ಇಲ್ಲಿನ ನೌಕರರು ಅಷ್ಟೇ ನಾಜೂಕಿನಿಂದ ಮತ್ತು ಶ್ರದ್ಧೆಯಿಂದ ಇದನ್ನು ಮಾಡುತ್ತಿದ್ದಾರೆ.

ಜಿ–ಕ್ಲಾಸ್‌ನ ಕವಚ ಸಿದ್ಧಗೊಂಡ ನಂತರ ಇದರ ಹ್ಯಾಂಡ್‌ ಪಾಲಿಷಿಂಗ್‌ ನಡೆಯುತ್ತದೆ. ಯಂತ್ರದ ಕಟು ಅಂಚುಗಳನ್ನು ಮೃದುವಾಗಿ ಕಾಣುಂತೆ ಮಾಡುವ ಅತ್ಯಂತ ನಾಜೂಕಿನ ಕೆಲಸ ಇದಾಗಿದೆ. ಜತೆಗೆ ಇದರ ಆಯತಾಕಾರದ ವಿನ್ಯಾಸಕ್ಕೆ ಎಲ್ಲಿಯೂ ಭಂಗ ಬಾರದಂತೆ ಇದನ್ನು ಸಜ್ಜುಗೊಳಿಸಲಾಗುತ್ತದೆ.

ಕನಿಷ್ಠ ಎರಡು ಗಂಟೆಗಳ ಪಾಲಿಷ್‌ ಇದಕ್ಕೆ ಅಗತ್ಯ. ಅತ್ಯಾಧುನಿಕ ಪೇಯಿಂಟಿಂಗ್ ಮತ್ತು ಕೋಟಿಂಗ್ ಮೂಲಕ ಉಕ್ಕು ತುಕ್ಕು ಹಿಡಿಯದಂತೆ ರಾಸಾಯನಿಕ ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕಾಗಿ ಫಾಸ್ಫೇಡಿಂಗ್ ಮತ್ತು ಡಿಗ್ರೀಸಿಂಗ್‌ ಪದ್ಧತಿ ಅನುಸರಿಸಲಾಗುತ್ತದೆ.

ಎಲೆಕ್ಟ್ರೊಫೊರೆಸಿಸ್‌ ಕೋಟಿಂಗ್‌ ಎಂಬ ತಂತ್ರಜ್ಞಾನದ ಮೂಲಕ ಎಲೆಕ್ಟ್ರಿಕ್ ಕರೆಂಟ್‌ ಹಾಯಿಸಿ ಲೋಹದ ಮೇಲೆ ಒಂದು ಪ್ರಬಲವಾದ ಪದರ ಸೃಷ್ಟಿಸಲಾಗುತ್ತದೆ. ಬಾಗಿಲು, ಮೇಲ್ಛಾವಣಿಯ ಸಂಧುಗಳಿಗೆ, ಚಾಸಿಸ್‌ ಮತ್ತು ಆರ್ಮರ್‌ಗಳ ದೀರ್ಘಬಾಳಿಕೆಗೆ ಪಿಡಿಸಿ ಕೋಟ್‌ಗಳನ್ನು ಮಾಡಲಾಗುತ್ತದೆ

ಇವೆಲ್ಲದರಿಂದ ಜಿ–ಕ್ಲಾಸ್‌ ಅತಿ ಉಷ್ಣತೆಯ ಮರುಭೂಮಿಯಲ್ಲಿ ಮತ್ತು ಕೊರೆವ ಚಳಿಯ ಅಂಟಾಟಿಕಾದಲ್ಲೂ ಸದೃಢವಾಗಿರುವಂತೆ ಸಿದ್ಧಪಡಿಸಲಾಗುತ್ತದೆ.

ಜಿ–ಕ್ಲಾಸ್‌ನ ಒಳಾಂಗಣವನ್ನು ಅಂದಗೊಳಿಸಲು ಯಾವುದೇ ಕಲೆಗಳಿಲ್ಲದ ಚರ್ಮವನ್ನು ಬಳಸಲಾಗುತ್ತದೆ. ಇದನ್ನು ಜರ್ಮನಿ ಮತ್ತು ಆಸ್ಟ್ರಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಗುಣಮಟ್ಟ ಕಾಯ್ದುಕೊಳ್ಳಲು ಪ್ರತಿಯೊಂದು ಚರ್ಮದ ಹಾಳೆಯನ್ನು ಲೇಸರ್ ಕಿರಣಗಳ ಮೂಲಕ ಪರೀಕ್ಷಿಸಲಾಗುತ್ತದೆ. ಇದಕ್ಕೆ ಫ್ರಾನ್ಸ್‌ನಿಂದ ತರಿಸಲಾದ ಉತ್ಕೃಷ್ಟ ಗುಣಮಟ್ಟದ ಲೆನಿನ್ ದಾರವನ್ನು ಬಳಸಲಾಗುತ್ತದೆ. ಹೀಗಾಗಿ ಜಿ–ಕ್ಲಾಸ್‌ನ ಆಸನಗಳು ಹೆಚ್ಚು ವಿಲಾಸಿತನದಿಂದಲೂ ಮತ್ತು ಕುಶಲತೆ ಹೆಚ್ಚಾಗಿ ಕಾಣಲಿದೆ.

ಎಎಂಜಿ ಜಿ63 ಮಾದರಿಯ ಕಾರು 4.0 ಲೀಟರ್‌ನ ವಿ8 ಬಿ1 ಟರ್ಬೊ ಎಂಜಿನ್‌ ಹೊಂದಿದೆ. ಇದು ಬರೋಬ್ಬರಿ 585 ಅಶ್ವಶಕ್ತಿ ಮತ್ತು 850 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸಬಲ್ಲದು. 9 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಅನ್ನು ಇದು ಹೊಂದಿದೆ. 48 ವೋಲ್ಟ್‌ ಹೈಬ್ರೀಡ್ ಸಿಸ್ಟಂ ಇದರದ್ದು. 0ಯಿಂದ 100 ಕಿ.ಮೀ।ವೇಗವನ್ನು 4.5 ಸೆಕೆಂಡುಗಳಲ್ಲಿ ಕ್ರಮಿಸಲಿದೆ.

ಇಷ್ಟು ಶಕ್ತಿಶಾಲಿ ಎಂಜಿನ್‌ ಹೊಂದಿರುವ ಜಿ–ಕ್ಲಾಸ್‌ ಪ್ರತಿ 20 ಲೀಟರ್ ಇಂಧನದಲ್ಲಿ 100 ಕಿ.ಮೀ. ಕ್ರಮಿಸುವಷ್ಟು ಇಂಧನ ಕ್ಷಮತೆ ಹೊಂದಿದೆ.

ಮರ್ಸಿಡೀಸ್ ಬೆಂಜ್‌ ಜಿ–ಕ್ಲಾಸ್‌ ಹೇಗೆ ತಯಾರಾಗುತ್ತದೆ ಎಂಬುದನ್ನು ನೀವೀಗ ಓದಿ, ನೋಡಿದಿರಿ. ನೀವು ಕಾರು ತೆಗೆದುಕೊಳ್ಳಬೇಕೆಂದಿದ್ದರೆ ಯಾವ ಕಾರು ನಿಮ್ಮ ಆಯ್ಕೆ ಎಂಬುದನ್ನು ಕಮೆಂಟ್ ಸೆಕ್ಷನ್‌ನಲ್ಲಿ ಬರೆಯಿರಿ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ