ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು, ನೀರೀಕ್ಷೆಯಂತೆ ಮಾರಾಟವಾಗದೆ ನಿಂತಿರುವ ಕಾರುಗಳು. ಈ ಸಮಸ್ಯೆಗೆ ಪರಿಹಾರವೆಂಬಂತೆ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (GST) ಪರಿಷ್ಕರಿಸಲು ಮುಂದಾಗಿದೆ. ಬಹುತೇಕ ಕೊನೆಯ ಹಂತದಲ್ಲಿರುವ ಈ ಪ್ರಕ್ರಿಯೆ ಹಬ್ಬದ ಸಂದರ್ಭದಲ್ಲೇ ಜಾರಿಯಾದಲ್ಲಿ ಗ್ರಾಹಕರು, ತಯಾರಕರು ಇಬ್ಬರೂ ಖುಷ್.
ಜಿಎಸ್‌ಟಿ ಸುಧಾರಣೆಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಮಾದರಿಯ ಕಾರುಗಳನ್ನೇ ಗಮದಲ್ಲಿಟ್ಟುಕೊಂಡು ತೆರಿಗೆ ಹೊರೆ ತಗ್ಗಿಸಲು ಮುಂದಾಗಿದೆ. ಇದು ಮೊದಲ ಕಾರಿನ ಕನಸು ಕಾಣುತ್ತಿರುವ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಆಸೆ ಈಡೇರಲಿದೆ. ಆದರೆ ವಿಲಾಸಿ ಕಾರುಗಳಿಗೆ ಈಗಿರುವ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿರುವ ಜಿಎಸ್‌ಟಿ ಮಂಡಳಿ, ಬ್ಯಾಟರಿ ಚಾಲಿತ ಕಾರುಗಳಿಗೆ (EV) ಸದ್ಯ ಇರುವ ಪ್ರೋತ್ಸಾಹ ಹಾಗೇ ಮುಂದುವರಿಯಲಿದೆ ಎಂದಿದೆ.
GST ದರ ಬದಲಾವಣೆಯಿಂದ ಆಗುವ ಪರಿಣಾಮಗಳೇನು?
ಕಾರುಗಳ ಮೇಲೆ ಸದ್ಯ ಇರುವ ಶೇ 28ರ ತೆರಿಗೆ ಸ್ಲಾಬ್ ಅನ್ನು ಶೇ 18ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಹೀಗಾದಲ್ಲಿ ಆರಂಭಿಕ ಶ್ರೇಣಿಯ ಕಾರುಗಳ ಬೆಲೆ ಶೇ 8ರಿಂದ ಶೇ 13ರಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ.
ಬ್ಯಾಟರಿ ಚಾಲಿತ ಇವಿ ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲೆ ಸದ್ಯ ಶೇ 5ರಷ್ಟು ಜಿಎಸ್‌ಟಿ ಇದ್ದು, ಅದು ಹಾಗೆಯೇ ಮುಂದುವರಿಯಲಿದೆ.
ಆದರೆ ವಿಲಾಸಿ ಕಾರು ಹಾಗೂ ಬೈಕುಗಳ ಮೇಲೆ ವಿಶೇಷ ಶೇ 40ರಷ್ಟು ತೆರಿಗೆ ಸ್ಲಾಬ್ ಇದ್ದು, ಅದು ಹಾಗೆಯೇ ಮುಂದುವರಿಯಲಿದೆ. ಹೀಗಾಗಿ ಜಿಎಸ್‌ಟಿ ಪರಿಷ್ಕರಣೆ ಆದರೂ ಶ್ರೀಮಂತರಿಗೆ ಯಾವುದೇ ವ್ಯತ್ಯಾಸವಾಗದು.
ಉದಾಹರಣೆಯಾಗಿ ನೋಡುವುದಾದರೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿಗೆ ಸುಮಾರು ₹60 ಸಾವಿರದಷ್ಟು ಕಡಿಮೆಯಾಗಬಹುದು. ಮಹೀಂದ್ರಾ ಎಕ್ಸ್‌ಯುವಿ700 ಕಾರಿಗೆ ಸುಮಾರು ₹1.15ಲಕ್ಷದಷ್ಟು ದರ ಕಡಿತವಾಗಬಹುದು.

ಬೆಲೆ ಇಳಿಕೆಯಿಂದ ಸಾಲದ ಪ್ರಮಾಣ, ತೀರಿಸಬೇಕಾದ ಸಾಲ ರೂಪದ ಇಎಂಐ ಎಲ್ಲವೂ ಕಡಿಮೆಯಾಗಲಿದೆ. ಈ ಎಲ್ಲಾ ಬೆಳವಣಿಗೆಯಿಂದ ಬರಲಿರುವ ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಕಾರುಗಳ ಮಾರಾಟ ಹೆಚ್ಚಳವಾಗುವ ನಿರೀಕ್ಷೆ ಇದೆ.
ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗಾಗಿಯೇ ಕಾರುಗಳನ್ನು ಸಿದ್ಧಪಡಿಸುವ ಮಾರುತಿ, ಹ್ಯುಂಡೇ, ಟಾಟಾ, ಹೊಂಡಾ, ಮಹೀಂದ್ರಾ ಸೇರಿದಂತೆ ಹಲವು ಜನಪ್ರಿಯ ಕಾರು ತಯಾರಕರಿಗೂ ಜಿಎಸ್‌ಟಿ ಪರಿಷ್ಕರಣೆಯಿಂದ ಲಾಭವಾಗುವ ನಿರೀಕ್ಷೆ ಇದೆ. ಕಳೆದ ಕೆಲ ತಿಂಗಳ ಹಿಂದೆ ಕಾರು ತಯಾರಿಕಾ ಕಂಪನಿಗಳು ತಮ್ಮ ಮಾರಾಟ ಕುಸಿಯುತ್ತಿರುವ ಕುರಿತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಕ್ಯಾಸ್ಕೇಡಿಂಗ್ ತೆರಿಗೆ ರದ್ದುಗೊಳಿಸಲು ಮತ್ತು ಇನ್‌ಪುಟ್ ಕ್ರೆಡಿಟ್‌ಗಳಿಂದ ಉತ್ಪಾದನಾ ವೆಚ್ಚ ಕಡಿತ ಮಾಡುವ ಕೋರಿಕೆಯನ್ನೂ ಸಲ್ಲಿಸಿದ್ದರು.

ಗ್ರಾಹಕರು, ತಯಾರಕರಂತೆಯೇ ವಿತರಕರೂ ಇದರ ಲಾಭ ಪಡೆಯಲಿದ್ದಾರೆ. ಏಕರೂಪ ಜಿಎಸ್‌ಟಿ ವ್ಯವಸ್ಥೆಯಿಂದ ವ್ಯವಹಾರ ಸುಲಭವಾಗಲಿದೆ. ಹಳೆಯ ಕಾರುಗಳ ಮಾರಾಟದಿಂದ ಲಾಭಾಂಶ ಮೇಲಿನ ಜಿಎಸ್‌ಟಿ ಇರುವುದೂ ಲಾಭವಾಗಲಿದೆ.
ಹೊಸ ಬುಕ್ಕಿಂಗ್‌ಗಳಲ್ಲಿ ನಿಧಾನ: ಗ್ರಾಹಕರು ಕಾಯುತ್ತಿರುವುದರಿಂದ ತಾತ್ಕಾಲಿಕ ಕುಗ್ಗು, ಆದರೆ ಜಾರಿಗೆ ಬಂದ ತಕ್ಷಣ ಪುನಃ ಚೇತರಿಕೆ.
ಇವಿ ಮತ್ತು ಇಂಧನ (ಡೀಸೆಲ್/ ಪೆಟ್ರೋಲ್) ಬಳಕೆಯ ವಾಹನಗಳು ಅಗ್ಗವಾಗುವುದರಿಂದ ಇವಿಗಳ ಮಾರಾಟದಲ್ಲಿ ಸ್ವಲ್ಪ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಬ್ಯಾಟರಿ ಚಾಲಿತ ವಾಹನಗಳ ಮಾರಾಟಕ್ಕೆ ಇನ್ನೂ ಹೆಚ್ಚಿನ ಉತ್ತೇಜವನ್ನು ಈ ಕ್ಷೇತ್ರ ಬಯಸುತ್ತಿದೆ ಎಂದು ಮಾರುಕಟ್ಟೆ ಪಂಡಿತರು ಹೇಳಿದ್ದಾರೆ.
