Tesla ಕಾರು ನೋಡಲು, ಟೆಸ್ಟ್‌ ಡ್ರೈವ್‌ಗೆ ಬೆಂಗಳೂರಿನಲ್ಲೂ ಅವಕಾಶ

Tesla Model Y

ಭಾರತದಲ್ಲಿ ತನ್ನ ಬ್ಯಾಟರಿ ಚಾಲಿತ ಕಾರುಗಳ ಮಾರಾಟ ಪ್ರಗತಿಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿರುವ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು, ಬೆಂಗಳೂರಿನಲ್ಲಿ ತನ್ನ ಮಳಿಗೆಯನ್ನು ಅತಿ ಶೀಘ್ರದಲ್ಲಿ ಆರಂಭಿಸುವ ಸೂಚನೆ ನೀಡಿದೆ.

ಇದಕ್ಕೆ ಪೂರ್ವಭಾವಿಯಾಗಿ ಜ. 31ರವರೆಗೂ ಟೆಸ್ಲಾ ಕಂಪನಿಯ ‘ಮಾಡೆಲ್ ವೈ’ ಕಾರು ನೋಡಲು ಹಾಗೂ ಟೆಸ್ಟ್‌ ಡ್ರೈವ್‌ಗೆ ಅವಕಾಶ ಕಲ್ಪಿಸಿದೆ.

ಮುಂಬೈ ಹಾಗೂ ದೆಹಲಿ ನಂತರ ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ತನ್ನ ಮಾರಾಟ ಮಳಿಗೆಯನ್ನು ಬೆಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದೆ. ಅದಕ್ಕೂ ಪೂರ್ವದಲ್ಲಿ ಟೆಸ್ಲಾ ಕಾರು ಪ್ರಿಯರಿಗಾಗಿ ಜ. 15ರಿಂದ ನಗರದ ಕೂಡ್ಲು ಗೇಟ್ ಬಳಿ ಇರುವ ‘ಆ್ಯಕೊ’ ಡ್ರೈವ್ ಸರ್ವೀಸ್ ಸೆಂಟರ್‌ನಲ್ಲಿ ವೀಕ್ಷಣೆಗೆ ಅವಕಾಶ ನೀಡಿದೆ.

ಇದರಲ್ಲಿ ಮಾಹಿತಿಯೊಂದಿಗೆ ಕಾರನ್ನು ನೇರವಾಗಿಯೂ ವೀಕ್ಷಿಸಬಹುದು. ಟೆಸ್ಲಾದ ವಿನ್ಯಾಸ, ತಂತ್ರಜ್ಞಾನ, ಸುರಕ್ಷತಾ ಸಾಧನ ಮತ್ತು ಅದರ ಕಾರ್ಯಕ್ಷಮತೆಯ ಮಾಹಿತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಕಂಪನಿ ಹೇಳಿದೆ.

ತಂತ್ರಜ್ಞಾನ ಹಾಗೂ ಆವಿಷ್ಕಾರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ಕಾರುಗಳ ಪೂರಕ ಬೆಳವಣಿಗೆಗೆ ಟೆಸ್ಲಾ ಮಾದರಿ ಸಹಕಾರಿ. ಇದಕ್ಕಾಗಿ ಕಾರಿನ ಟೆಸ್ಟ್‌ ಡ್ರೈವ್ ಮತ್ತು ಅದರ ಪೂರ್ಣ ಮಾಹಿತಿ ನೀಡುವುದಾಗಿಯೂ ಕಂಪನಿ ಹೇಳಿದೆ.

ಟೆಸ್ಟ್‌ ಡ್ರೈವ್‌ಗೆ ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಟೆಸ್ಟ್‌ ಡ್ರೈವ್‌ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಅವಕಾಶವಿದೆ. ಇದಕ್ಕಾಗಿ ಟೆಸ್ಲಾ ಇಂಡಿಯಾ ಅಂತರ್ಜಾಲ ತಾಣದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

2023 ಹಾಗೂ 2024ರಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಪಡೆದ ಟೆಸ್ಲಾದ ಮಾದರಿ ‘ವೈ’ಗೆ ಪಂಚ ತಾರಾ ಸುರಕ್ಷತಾ ಮಾನ್ಯತೆ ಲಭಿಸಿದೆ. ಆ ಮೂಲಕ ಸುರಕ್ಷತೆಯಲ್ಲಿ ಹೊಸತೊಂದು ಮೈಲಿಗಲ್ಲು ಸೃಷ್ಟಿಸಿದೆ. 267 ಕಿ.ಮೀ. ದೂರ ಕ್ರಮಿಸಲು ಬೇಕಾದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಕೇವಲ 15 ನಿಮಿಷಗಳಲ್ಲಿ ಚಾರ್ಜ್‌ ಮಾಡುವ ಸೌಲಭ್ಯ ಇದರದ್ದು. ಭಾರತದಲ್ಲಿ ಸದ್ಯ ಲಭ್ಯವಿರುವ ಮಾಡೆಲ್ ವೈ ಅನ್ನು ಮನೆಯಲ್ಲೇ ಚಾರ್ಜ್ ಮಾಡಲು ಅನುಕೂಲವಾಗುವಂಥ ಸಾಧನವನ್ನೂ ಕಂಪನಿ ನೀಡುತ್ತಿದೆ. 

ಮಾಡೆಲ್ ವೈ ಹೀಗಿದೆ…

ಹಿಂಬದಿ ಗಾಲಿಯಿಂದ ಚಲಿಸುವ ಮಾದರಿಯು ಒಂದು ಗರಿಷ್ಠ ಚಾರ್ಜ್‌ಗೆ 500 ಕಿ.ಮೀ. ದೂರವನ್ನು, ಲಾಂಗ್‌ ರೇಂಜ್ ಮಾದರಿಯಲ್ಲಿ 661 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಗರಿಷ್ಠ ವೇಗ ಎರಡೂ ಮಾದರಿಯಲ್ಲಿ ಪ್ರತಿ ಗಂಟೆಗೆ 201 ಕಿ.ಮೀ.

ಪ್ರತಿ ಗಂಟೆಗೆ 0 ಯಿಂದ 100 ಕಿ.ಮೀ. ವೇಗ ಕ್ರಮಿಸಲು ಕ್ರಮವಾಗಿ 5.9 ಸೆಕೆಂಡ್‌ ಹಾಗೂ 5.6 ಸೆಕೆಂಡ್‌ ತೆಗೆದುಕೊಳ್ಳಲಿದೆ.

ಬೆಲೆಯೂ ಕ್ರಮವಾಗಿ ₹59.89 ಲಕ್ಷ ಹಾಗೂ ₹67.89 ಲಕ್ಷ 

ಕಾರು ಸಾಲ ಬಡ್ಡಿ ದರ: ಶೇ 8.7ರಿಂದ ಶೇ 11.

ಮುಂಗಡ ಬುಕ್ಕಿಂಗ್‌ ಮೊತ್ತ ₹22 ಸಾವಿರ

ಅಡ್ಮಿನ್ ಮತ್ತು ಸರ್ವೀಸ್ ಫೀ: ₹50 ಸಾವಿರ

ಬುಕ್ಕಿಂಗ್ ಲಿಂಕ್‌: https://www.tesla.com/en_IN/modely/design

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ