ಪುಟಿನ್‌ ಭೇಟಿ ಮೂಲಕ ಭಾರತದ ರಸ್ತೆಗೂ ಇಳಿಯಿತು ರಷ್ಯಾದ ರೋಲ್ಸ್‌ ರಾಯ್ಸ್‌ Aurus Senat

Aurus Senat

ಲಕ್ಷುರಿ, ಸುರಕ್ಷತೆಯ ಜತೆಗೆ ಬ್ರಾಂಡ್‌ ಮೌಲ್ಯವನ್ನೂ ಹೊಂದಿರುವ ರಷ್ಯಾದ ಅರುಸ್‌ ಸೆನೆಟ್‌ ಅನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೂಲಕ ಭಾರತದ ರಸ್ತೆಗಿಳಿದಿದೆ.

ಕೇವಲ ಎರಡು ದಿನಗಳ ಮಟ್ಟಿಗೆ ಭಾರತಕ್ಕೆ ಬಂದಿಳಿದಿರುವ ಅರುಸ್ ಸೆನೆಟ್‌ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪುಟಿನ್‌ ಬಂದಿರುವುದು ಶಸ್ತ್ರಾಸ್ತ್ರಗಳ ವ್ಯಾಪಾರಕ್ಕೆ ಎಂಬುದು ಈಗ ಸುದ್ದಿಯಾಗಿದೆ. ಆದರೆ ಸಾಮಾನ್ಯ ಜನರ ಕಣ್ಣು ಮಾತ್ರ ಅರುಸ್ ಸೆನೆಟ್‌ ಮೇಲಿದೆ. ಭಾರತದ ರೂಪಾಯಿಯಲ್ಲಿ ಇದರ ಬೆಲೆ ಸುಮಾರು ₹2.5 ಕೋಟಿ.

ಇದರ ಜತೆಗೆ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲೇ ಹೋದರೂ ಅವರಿಗಾಗಿಯೇ ಇರುವ ವಿಶಿಷ್ಟ ಸೌಲಭ್ಯದ, ಉತ್ಕೃಷ್ಟ ಭದ್ರತಾ ಸೌಲಭ್ಯ ಹೊಂದಿರುವ ಕಾರುಗಳು ಸದ್ಯ ಸುದ್ದಿಯಲ್ಲಿದೆ. ಪುಟಿನ್ ಅವರು ಡಿ. 4 ಹಾಗೂ 5ರಂದು ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರಿಗಾಗಿ ರಷ್ಯಾ ನಿರ್ಮಿತ ಉರುಸ್ ಸೆನೆಟ್‌ ಕಾರು ಭಾರತಕ್ಕೆ ಬಂದಿಳಿದಿತ್ತು. ಇದರಲ್ಲಿ ಲಭ್ಯವಿರುವ ಭದ್ರತಾ ಸೌಕರ್ಯ, ವಿಲಾಸಿ ಸೌಲಭ್ಯ ಹಾಗೂ ಅದರ ಸಾಮರ್ಥ್ಯ ಬಹು ಚರ್ಚಿತ ವಿಷಯವಾಗಿದೆ.

ಪುಟಿನ್ ಅವರು ಕಳೆದ ವರ್ಷ ಉರುಸ್‌ ಕಾರನ್ನು ಕಿಮ್‌ ಜಾಂಗ್‌ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇದೇ ಬ್ರಾಂಡ್‌ನ ಕಾರಿನಲ್ಲಿ ಪುಟಿನ್‌ ಭಾರತದಲ್ಲಿ ಸಂಚರಿಸಿದ್ದಾರೆ. ಅಮೆರಿಕದ ಅಧ್ಯಕ್ಷರ ಪ್ರಯಾಣಕ್ಕೆ ಇರುವ ಷವರ್ಲೆ ಮಾಲೀಕತ್ವದ ಕ್ಯಾಡಿಲ್ಯಾಕ್‌ನ ‘ದಿ ಬೀಸ್ಟ್‌’ ನಂತೆಯೇ ರಷ್ಯಾ ಅಧ್ಯಕ್ಷರಿಗಾಗಿ ಈಗಿರುವ ಅರುಸ್ ಸೆನೆಟ್‌ ಮೇಲೆ ಈಗ ಎಲ್ಲರ ಕಣ್ಣು.

ರಷ್ಯಾ ಅಧ್ಯಕ್ಷ ಪುಟಿನ್ ಅವರಿಗಾಗಿ ಅರುಸ್ ಸೆನೆಟ್ ಎಂಬ ಲಿಮೋಸಿನ್‌ ಕಾರನ್ನು ಆ ದೇಶ ನೀಡಿದೆ. ಈ ಕಾರು 2018ರಲ್ಲಿ ಅಧ್ಯಕ್ಷರಿಗಾಗಿ ನಿಯೋಜನೆಗೊಂಡಿತು. ಅದಕ್ಕೂ ಮೊದಲು ಜರ್ಮನಿಯ ಮರ್ಸಿಡೀಸ್ ಬೆಂಜ್‌ನ ಎಸ್‌–600 ಕಾರಿನಲ್ಲಿ ಅಧ್ಯಕ್ಷರು ಪ್ರಯಾಣಿಸುತ್ತಿದ್ದರು. ‘ಮಾಸ್ಕೊ ಮೊದಲು’ ಎಂಬ ರಷ್ಯಾ ಅಭಿಯಾನದಿಂದಾಗಿ ಸ್ವದೇಶಿ ನಿರ್ಮಿತ ವಿಲಾಸಿ ಕಾರು ಈಗ ರಷ್ಯಾ ಅಧ್ಯಕ್ಷರ ಅಧಿಕೃತ ವಾಹನವಾಗಿದೆ.

ಅರುಸ್‌ ಸೆನೆಟ್‌ ಅನ್ನು ರಷ್ಯಾದ ರೋಲ್ಸ್ ರಾಯ್ಸ್ ಎಂದೇ ಕರೆಯಲಾಗುತ್ತದೆ. ಇದನ್ನು ಅರುಸ್ ಮೋಟಾರ್ಸ್‌ ತಯಾರಿಸುತ್ತದೆ. ಕಾರ್ಟೆಜ್‌ ಯೋಜನೆಯ ಭಾಗವಾದಿ ಈ ಕಾರು ಅತ್ಯಂತ ಉತ್ಕೃಷ್ಟ ಭದ್ರತೆ ಹಾಗೂ ವಿಲಾಸಿ ಸೌಲಭ್ಯಗಳನ್ನು ಹೊಂದಿದೆ.

ಉರುಸ್‌ ಸೆನೆಟ್‌ನ ವಿಶೇಷತೆಗಳು

ಎಂಜಿನ್‌: 4.4 ಲೀಟರ್‌ನ ಟ್ವಿನ್ ಟರ್ಬೊ ವಿ8 ಹೈಬ್ರಿಡ್‌ ಸೌಕರ್ಯ ಹೊಂದಿದೆ. 598 ಅಶ್ವಶಕ್ತಿ 

ಕಾರ್ಯಕ್ಷಮತೆ: ಪ್ರತಿ ಗಂಟೆಗೆ 0ಯಿಂದ 100 ಕಿ.ಮೀ. ವೇಗ ತಲುಪಲು 6 ಸೆಕೆಂಡುಗಳು ಈ ಕಾರಿಗೆ ಸಾಕು. ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 249 ಕಿ.ಮೀ.

ಏಳು ಮೀಟರ್ ಉದ್ದ ಇರುವ ಈ ಕಾರು ವಿಆರ್‌10 ಗುಂಡು ಹಾರಿಸುವ ಗುಣವನ್ನು ಹೊಂದಿದೆ. ಜತೆಗೆ ಗುಂಡು ನಿರೋಧಕ, ಗ್ರನೇಡ್‌ ಸಿಡಿದರೂ ಕಾರಿಗೆ ಏನೂ ಆಗದಂತೆ ವಿನ್ಯಾಸ ಮಾಡಲಾಗಿದೆ. ಟೈರ್‌ ಪಂಚರ್ ಆದರೂ ಈ ಕಾರು ಚಲಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ಇದರ ಗಾಜು 6 ಇಂಚಿನಷ್ಟಿದೆ. ತುರ್ತು ನಿರ್ಗಗಮನ, ಅಗ್ನಿ ನಿರೋಧಕ ವ್ಯವಸ್ಥೆ ಇದರಲ್ಲಿದೆ. ರಾಸಾಯನಿಕ ದಾಳಿಯಿಂದಲೂ ಒಳಗಿರುವವರನ್ನು ಉರುಸ್ ಸೆನೆಟ್ ರಕ್ಷಿಸಲಿದೆ. ಸಂಪರ್ಕಕ್ಕೆ ಮಿನಿ ಕಮಾಂಡ್ ಸೆಂಟರ್ ಇದರೊಳಗಿದೆ. 

ವಾರ್ಷಿಕ 120 ಕಾರುಗಳನ್ನು ಮಾತ್ರ ಈ ಕಂಪನಿ ಅಭಿವೃದ್ಧಿಪಡಿಸುತ್ತದೆ ಎಂದು ಕಂಪನಿಯ ವರದಿಯಲ್ಲಿದೆ. ಇದರ ಬೆಲೆ ರೂಪಾಯಿಯಲ್ಲಿ ₹2.5 ಕೋಟಿ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗೆ ಚೀನಾ ಭೇಟಿ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರ ಅಧಿಕೃತಕ ಕಾರಿನಲ್ಲಿ ಸಂಚರಿಸಿದ್ದರು. ಇದನ್ನು ಸ್ವತಃ ಮೋದಿ ಅವರೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ