ಉಕ್ಕು ಉತ್ಪಾದನೆಯಲ್ಲಿ ಬೃಹತ್ ಘಟಕ ಹೊಂದಿರುವ ಜೆಎಸ್ಡಬ್ಲೂ ಕಂಪನಿಯು ಇದೀಗ ಕಾರು ತಯಾರಿಕಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಎಂಜಿ ಮೋಟಾರ್ಸ್ನ ವಿಂಡ್ಸರ್ ಕಾರು ಮೂಲಕ ವಾಹನ ಕ್ಷೇತ್ರಕ್ಕೆ ಕಾಲಿಟ್ಟಿರುವ ಜೆಎಸ್ಡಬ್ಲೂ ಇದೀಗ ಚೀನಾದ ಹೈಬ್ರಿಡ್ ಮಾದರಿಯ ರಗಡ್ ಎಸ್ಯುವಿ ಜೆಟೂರ್ ಅನ್ನು ಭಾರತದಲ್ಲಿ ಪರಿಚಯಿಸುತ್ತಿದೆ.
ದುಬೈನ ಮರಳುಗಾಡಿನಲ್ಲಿ ದೂಳೆಬ್ಬಿಸಿರುವ ರಗಡ್ ಎಸ್ಯುವಿ ಆದ ಜೆಟೂರ್ ಹೈಬ್ರಿಡ್ ಮಾದರಿಯಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದೆ. ಟಿ2 ಎಂಬ ಮಾದರಿಯ ಹೈಬ್ರಿಡ್ ಎಸ್ಯುವಿ ಕಾರನ್ನು 2026ರ ಅಕ್ಟೋಬರ್ನಲ್ಲಿ ಈ ಕಾರನ್ನು ಜೆಎಸ್ಡಬ್ಲೂ ಕಂಪನಿಯು ಭಾರತದಲ್ಲಿ ಪರಿಚಯಿಸುತ್ತಿದೆ. ಸದ್ಯಕ್ಕೆ ಎಕ್ಸ್ ಶೋರೂಂ ಬೆಲೆ ₹15ಲಕ್ಷದಿಂದ ₹30ಲಕ್ಷದವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ.

ಪ್ರಮುಖ ವೈಶಿಷ್ಟ್ಯಗಳು
ಲ್ಯಾಂಡ್ರೋವರ್ ಡಿಫೆಂಡರ್ ಶೈಲಿಯಿಂದ ಪ್ರೇರಣೆ ಪಡೆದಂತೆ ಭಾಸವಾಗುವ ವಿನ್ಯಾಸ ಇದರದ್ದು. ಬಾಕ್ಸ್ ಮಾದರಿಯ ವಿನ್ಯಾಸ, ಬಲಿಷ್ಠ ದೇಹ, ಹಿಂಬದಿ ಸ್ಪೇರ್ ಹೊಂದಿರುವ ಫ್ಲಾಟ್ ಟೇಲ್ಗೇಟ್ ಇದರ ಸ್ವರೂಪ.
ಹೈ ಸ್ಟ್ರೆಂತ್ ಮೊನೊಕಾಕ್ ಪ್ಲಾಟ್ಫಾರ್ಮ್ ಇದರದ್ದಾಗಿದ್ದು, ಆಫ್ ರೋಡ್ ಸಾಮರ್ಥ್ಯಕ್ಕೆ ತಕ್ಕಂತ ವಿನ್ಯಾಸ ಇದರದ್ದು. 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಇದು ಹೊಂದಿದ್ದು, 154 ಅಶ್ವಶಕ್ತಿ, 220 ನ್ಯಾನೊ ಮೀಟರ್ನಷ್ಟು ಇದರ ಶಕ್ತಿ. ಡ್ಯುವಲ್ ಮೊಟಾರ್ ಹೈಬ್ರಿಡ್ ಕಾರು ಇದಾಗಿದ್ದು, ಪ್ಲಗ್ ಇನ್ ಹೈಬ್ರಿಡ್ ಐ–ಡಿಎಂ ತಂತ್ರಜ್ಞಾನ ಈ ಕಾರಿನದ್ದು ಎಂಬುದು ಸದ್ಯದ ಸುದ್ದಿ.
ಆಸಿಯಾನ್ ಎನ್ಕ್ಯಾಪ್ನಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಇದು ಹೊಂದಿದೆ. ವಯಸ್ಕರು ಮತ್ತು ಮಕ್ಕಳ ಸುರಕ್ಷತೆಯಲ್ಲಿ ಉತ್ತಮ ರ್ಯಾಂಕಿಂಗ್ ಅನ್ನು ಇದು ಪಡೆದಿದೆ.
ಉಕ್ಕು ಉದ್ಯಮದಲ್ಲಿ ಬೃಹದಾಕಾರವಾಗಿ ಬೆಳೆದಿದ್ದರೂ, ಜೆಎಸ್ಡಬ್ಲೂ ಕಾರು ಪ್ರಪಂಚದಲ್ಲಿ ಇನ್ನೂ ಶಿಶು. ಕಾರು ತಯಾರಿಕೆ ಮಾತ್ರವಲ್ಲದೆ, ಸೇವಾ ಜಾಲ ವಿಸ್ತರಣೆಗೆ ಇನ್ನೂ ಸಾಕಷ್ಟು ಕಾಲಾವಕಾಶದ ಅಗತ್ಯವಿದೆ.
ಹೈಬ್ರಿಡ್ ತಂತ್ರಜ್ಞಾನ ಇದರದ್ದಾಗಿರುವುದರಿಂದ ಮತ್ತು ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಇನ್ನೂ ಅಭಿವೃದ್ಧಿ ಹಂತದಲ್ಲಿರುವುದರಿಂದ ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಚರ್ಚೆಯೂ ಇದೆ. ಜತೆಗೆ ಹಾಲಿ ಮಾರುಕಟ್ಟೆಯಲ್ಲಿರುವ ಪ್ರೀಮಿಯಂ ಎಸ್ಯುವಿ ಬೆಲೆ ಸಮೀಪ ಇರುವ ಸಾಧ್ಯತೆ ಇದೆ.






