Maruti Suzuki Swift: 20 ವರ್ಷ ಕಳೆದರೂ ಅಳಿಯದ ಈ ಹ್ಯಾಚ್‌ಬ್ಯಾಕ್‌ ಮೋಹ

ಮಾರುತಿ ಸುಙುಕಿ ಹೊಸ ಸ್ವಿಫ್ಟ್‌

ದುಂಡುಮೊಗದ ಸುಂದರ ಹ್ಯಾಚ್‌ಬ್ಯಾಕ್‌ ಸ್ವಿಫ್ಟ್‌ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಪುಟ್ಟ ಕಾರು. ರಸ್ತೆಯಲ್ಲಿ ಅದು ಸಾಗುತ್ತಿದ್ದರೆ ಅದರ ನೋಟಕ್ಕೆ ಮನಸೋಲದವರೇ ಇಲ್ಲ. ಈಗಲೂ ಬಹುತೇಕರ ಅಚ್ಚುಮೆಚ್ಚಿನ ಹ್ಯಾಚ್‌ಬ್ಯಾಕ್‌ಗಳಲ್ಲಿ ಮಾರುತಿ ಸುಜುಕಿ ಸ್ವಫ್ಟ್‌ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

2005ರಲ್ಲಿ ಪರಿಚಯಗೊಂಡ ಸ್ವಿಫ್ಟ್ ಭಾರತದಲ್ಲಿ 20 ವರ್ಷಗಳನ್ನು ಕಳೆದಿವೆ. 2023–24ನೇ ಸಾಲಿನಲ್ಲಿ 2 ಲಕ್ಷ ಸ್ವಿಫ್ಟ್‌ ಮಾರಾಟವಾಗಿದೆ. ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಪಟ್ಟಿಯಲ್ಲಿ ಸ್ವಿಫ್ಟ್ 3ನೇ ಸ್ಥಾನದಲ್ಲಿ ನಿಲ್ಲುತ್ತದೆ ಅಂದರೆ ಇದರ ಬೇಡಿಕೆ ಈಗಲೂ ಹಾಗೇ ಉಳಿದಿರುವುದಕ್ಕೆ ಸಾಕ್ಷಿ.

ಕಾಲಕ್ಕೆ ತಕ್ಕಂತೆ ಬದಲಾದ ಸ್ವಿಫ್ಟ್‌

ಆರಂಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯ ಸ್ವಿಫ್ಟ್‌ ಲಭ್ಯವಿತ್ತು. ಡೀಸೆಲ್‌ನಲ್ಲಿ ಫಿಯೆಟ್‌ ಎಂಜಿನ್‌ ಅಳವಡಿಸಿದ ನಂತರ ಇದರ ಬೇಡಿಕೆಗೆ ಪಾರವೇ ಇರಲಿಲ್ಲ. ಶಕ್ತಿ ಮತ್ತು ಇಂಧನ ಕ್ಷಮತೆ ಮತ್ತು ಸುಂದರ ದುಂಡಗಿನ ನೋಟಕ್ಕೆ ಮನಸೋತವರೇ ಹೆಚ್ಚು. ಮಾಲಿನ್ಯ ನಿಯಂತ್ರಣದಲ್ಲಿ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಪರಿಣಾಮ ಮಾರುತಿ ಸುಜುಕಿ ತನ್ನ ಕಾರುಗಳಲ್ಲಿ ಪೆಟ್ರೋಲ್‌ ಮಾದರಿಯನ್ನು ಮಾತ್ರ ಉಳಿಸಿಕೊಳ್ಳಲು ನಿರ್ಧರಿಸಿತು. ಈಗ ಸಿಎನ್‌ಜಿ ಕೂಡಾ ಲಭ್ಯ.

ನಾಲ್ಕನೇ ತಲೆಮಾರಿನ ಸ್ವಿಫ್ಟ್‌ ಈಗ ಮಳಿಗೆಯಲ್ಲಿ ಲಭ್ಯ. ಕಡಿದಾದ ಹೆಡ್‌ಲ್ಯಾಂಪ್‌, ಅದೇ ದುಂಡಗಿನ ದೇಹ, ಮುಂಭಾಗದ ಗ್ರಿಲ್‌ನಲ್ಲಿ ಬದಲಾವಣೆ ಮಾಡಿದ್ದರೂ 2005ರಲ್ಲಿ ಪರಿಚಯಗೊಂಡ ಕಾರಿನ ಡಿಎನ್‌ಎ ಅನ್ನೇ ಕಾಪಾಡಿಕೊಂಡು ಬಂದಿದೆ.

ಈಗಿನ ಸ್ವಿಫ್ಟ್‌ನಲ್ಲಿ ಎಬಿಎಸ್‌ ಮತ್ತು ಏರ್‌ಬ್ಯಾಗ್‌ ಬೇಸಿಕ್‌ ವೇರಿಯಂಟ್‌ನಲ್ಲಿ ಸುರಕ್ಷತಾ ಸಾಧನವಾಗಿ ಲಭ್ಯ. ಉಳಿದಂತೆ ಟಚ್‌ಸ್ಕ್ರೀನ್‌ ಇನ್ಫೋಟೈನ್ಮೆಂಟ್‌ ಸಿಸ್ಟಂ, ಅಲಾಯ್ ವೀಲ್‌ ಕಾರಿನ ಸೌಕರ್ಯವನ್ನು ಹೆಚ್ಚಿಸಿದೆ. ಆ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹಳೆಯ ಸ್ವಿಫ್ಟ್‌ಗೆ ಈಗಲೂ ಬೇಡಿಕೆ

ಹೊಸ ತಲೆಮಾರಿನ ಸ್ವಿಫ್ಟ್‌ ಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇದ್ದರೂ, ಹಳೆಯ ಕಾರುಗಳಿಗೆ ಬೇಡಿಕೆ ಏನೂ ಕುಗ್ಗಿಲ್ಲ. ಇಂದಿಗೂ ಸ್ವಿಫ್ಟ್ ಅತ್ಯಧಿಕ ರಿಸೇಲ್ ಆಗುತ್ತಿರುವ ಕಾರು ಆಗಿದೆ. ಜತೆಗೆ ಸ್ವಿಫ್ಟ್ ಖರೀದಿಸಿದ ಗ್ರಾಹಕರು ಅತಿ ದೀರ್ಘ ಕಾಲದವರೆಗೆ ಇದನ್ನು ಇಟ್ಟುಕೊಂಡಿರುವುದೂ ಒಂದು ದಾಖಲೆಯೇ ಸರಿ.

ಇದಕ್ಕೆ ಬಹುಮುಖ್ಯ ಕಾರಣ ಸ್ವಿಫ್ಟ್‌ನ ಇಂಧನ ಕ್ಷಮತೆ. ಪ್ರತಿ ತಲೆಮಾರಿನ ಸ್ವಫ್ಟ್‌ನಲ್ಲೂ ವಿನ್ಯಾಸ, ಸೌಲಭ್ಯದ ಜತೆಗೆ ಇಂಧನ ಕ್ಷಮತೆಗೆ ಕಂಪನಿ ಹೆಚ್ಚು ಒತ್ತು ನೀಡಿದೆ. ಇದರ ಪರಿಣಾಮವಾಗಿ ಇಂದಿನ ಪೆಟ್ರೋಲ್ ಮಾದರಿಯ ಸ್ವಿಫ್ಟ್‌ ಪ್ರತಿ ಲೀಟರ್‌ಗೆ 22.38 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ. ಸಿಎನ್‌ಜಿ ಮಾದರಿಯ ಸ್ವಿಫ್ಟ್‌ ಪ್ರತಿ ಕೆ.ಜಿ.ಗೆ 30.9 ಕಿ.ಮೀ. ಹೊಂದಿದೆ. ಈ ಕಾರಣದಿಂದಾಗಿ ನಗರ ಪ್ರದೇಶದ ಬಹುತೇಕ ಗ್ರಾಹಕರು ಸ್ವಿಫ್ಟ್‌ ಅನ್ನು ಇಂದಿಗೂ ತಮ್ಮ ಆಯ್ಕೆಪಟ್ಟಿಯಲ್ಲಿ ಹೊಂದಿರುತ್ತಾರೆ.

ಜಪಾನ್ ತಂತ್ರಜ್ಞಾನ ಹಾಗೂ ವಿನ್ಯಾಸದಲ್ಲಿ ಅಭಿವೃದ್ಧಿಗೊಂಡಿರುವ ಸ್ವಿಫ್ಟ್‌ ತನ್ನ ಇತರ ಪ್ರತಿಸ್ಪರ್ಧಿಗಳಿಗಿಂತ ಸದಾ ಭಿನ್ನವಾಗಿಯೇ ನಿಂತಿದೆ. ಪುಟ್ಟ ಆಕಾರ, ಹಗುರ ದೇಹ ಮತ್ತು ನಿಖರ ನಿರ್ವಹಣೆ ಇದರ ತಾಕತ್ತು. ಕಾರಿನ ಚಾಲನೆಯೂ ಅತ್ಯಂತ ಸರಳ ಹಾಗೂ ಆರಾಮದಾಯಕ. ಹೀಗಾಗಿ ಸ್ವಿಫ್ಟ್‌ ಚಾಲನೆ ಮಾಡಿದವರು ದೊಡ್ಡ ಹಿತಾನುಭವ ಹೊಂದಿರುತ್ತಾರೆ.

ಸ್ವಿಫ್ಟ್ ನಿರ್ವಹಣೆಗೆ ವೆಚ್ಚ ಕಡಿಮೆ, ಸರ್ವೀಸ್‌ ನೆಟ್‌ವರ್ಕ್‌ ಎಲ್ಲೆಡೆ ಲಭ್ಯ. ಇದರ ಬಿಡಿ ಭಾಗಗಳು ಎಲ್ಲೆಡೆ ಲಭ್ಯ ಎನ್ನುವುದು ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಈ ಕಾರಿನ ಮಾಲೀಕರ ಸಮಾಧಾನ. ಹೀಗಾಗಿ 20 ವರ್ಷಗಳ ನಂತರವೂ ಸ್ವಿಫ್ಟ್‌ ಅಳಿಯದೇ, ಮನಸ್ಸಿನಿಂದ ಮರೆಯಾಗದೇ ಉಳಿದಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ