Volkswagen Polo EV: ಮರಳಿ ಬಂತು ಬಟನ್ ಆಧಾರಿತ ಇನ್ಫೊಟೈನ್ಮೆಂಟ್‌ ಸಿಸ್ಟಂ

ಫೋಕ್ಸ್‌ವ್ಯಾಗನ್ ಪೊಲೊ ಇವಿ ಒಳ ವಿನ್ಯಾಸ

ಬ್ಯಾಟರಿ ಚಾಲಿತ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಂಬಂಧಿಸಿದಂತೆ ಜರ್ಮನಿಯ ಫೋಕ್ಸ್‌ ವ್ಯಾಗನ್‌ ತನ್ನ ಪೊಲೊ ಆವೃತ್ತಿಯ ಹೊರ ವಿನ್ಯಾಸವನ್ನು ಕೆಲ ದಿನಗಳ ಹಿಂದೆ ಬಹಿರಂಗಗೊಳಿಸಿತ್ತು. ಆದರೆ ಇದೀಗ ಒಳಾಂಗಣವನ್ನೂ ಬಹಿರಂಗಗೊಳಿಸಿರುವ ಕಂಪನಿಯು, ಗುಂಡಿಗಳುಳ್ಳ ಇನ್ಫೊಟೈನ್ಮೆಂಟ್ ಸಾಧನ ನೀಡಿ ಅಚ್ಚರಿ ಮೂಡಿಸಿದೆ.

ಒಂದು, ಎರಡು ಸಾಲದು ಎಂಬಂತೆ ಇದೀಗ ಮೂರು ಬೃಹತ್ ಪರದೆಗಳ ಇನ್ಫೊಟೈನ್ಮೆಂಟ್‌ ಸಾಧನವನ್ನು ಹೊಂದಿರುವ ಕಾರುಗಳು ಮಾರುಕಟ್ಟೆಗೆ ಧಾವಿಸುತ್ತಿವೆ. ಆದರೆ ಮತ್ತೊಂದೆಡೆ ಅಲೆಗೆ ವಿರುದ್ಧವಾಗಿ ಈಜಲು ಹೊರಟಿರುವ ಫೋಕ್ಸ್‌ವ್ಯಾಗನ್‌, ಕಾರು ಎಂಬುದು ಒಂದು ಯಾಂತ್ರಿಕ ಸಾಧನವೇ ಹೊರತು, ಸ್ಮಾರ್ಟ್‌ಫೋನ್ ಅಲ್ಲ ಎಂದು ಈ ಹೊಸ ಸಾಹಸಕ್ಕೆ ಕೈಹಾಕಿದೆ.

ಐದು ಆಸನಗಳ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಕಾರನ್ನು ಫೋಕ್ಸ್‌ವ್ಯಾಗನ್ ಅಭಿವೃದ್ಧಿಪಡಿಸಿದ್ದು, ಎಂಇಬಿ+ ಪ್ಲಾಟ್‌ಫಾರ್ಮ್‌ ಮೇಲೆ ಇದನ್ನು ತಯಾರಿಸಿದೆ. ಆದರೆ ಮನುಷ್ಯ ಮೊದಲು ಎಂಬ ತನ್ನ ಹಿಂದಿನ ಸಿದ್ಧಾಂತವನ್ನೇ ಫೋಕ್ಸ್‌ವ್ಯಾಗನ್‌ ಇದರಲ್ಲಿ ಮರಳಿ ತರುವ ಯತ್ನ ಮಾಡಿದೆ.

ಟಚ್‌ ಸ್ಕ್ರೀನ್‌ ಬಳಕೆ ತುಸು ಕಷ್ಟ. ನಿಖರವಾಗಿ ಬೆರಳನ್ನು ಪರದೆಯ ನಿರ್ದಿಷ್ಟ ಜಾಗದಲ್ಲಿ ಒತ್ತಬೇಕಾದಾಗ ಚಾಲಕನ ಗಮನ ರಸ್ತೆಯಿಂದ ಸರಿಯುತ್ತದೆ. ಆದರೆ, ಭೌತಿಕ ಗುಂಡಿಗಳನ್ನು ನೀಡಿದಾಗ, ರಸ್ತೆಯನ್ನು ನೋಡುತ್ತಲೇ ಸುಲಭವಾಗಿ ಗುಂಡಿಗಳನ್ನು ಒತ್ತಲು ಸಾಧ್ಯ ಎಂದಿರುವ ಕಂಪನಿಯು, ತನ್ನ ಈ ನೂತನ ಕಾರಿನಲ್ಲಿ ಹಳೆಯ ಬಟನ್‌ ಆಧಾರಿತ ಇನ್ಫೊಟೈನ್ಮೆಂಟ್‌ ಅನ್ನು, ಆಧುನಿಕ ಕಾಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ ನೀಡಿದೆ. ಇದರಿಂದ ಚಾಲಕ ರಸ್ತೆಯಿಂದ ತನ್ನ ಗಮನ ಹರಿಸುವುದೂ ಬೇಡ, ಕಂಟ್ರೋಲ್‌ಗಳನ್ನೂ ಸುಲಭವಾಗಿ ಬಳಸುವಂತೆ ಅಭಿವೃದ್ಧಿಪಡಿಸಿದೆ.

ಹಾಗೆಂದು ಪರದೆಯನ್ನು ಫೋಕ್ಸ್‌ವ್ಯಾಗನ್‌ ತೆಗೆದಿಲ್ಲ. ಬದಲಿಗೆ ಅದನ್ನು ನಿಯಂತ್ರಿಸಲು ಗುಂಡಿಗಳನ್ನು ನೀಡಿದೆ. ಈ ನೂತನ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಕ್ಲಸ್ಟರ್‌ ಮತ್ತು 13 ಇಂಚಿನ ಇನ್ಫೊಟೈನ್ಮೆಂಟ್‌ ಸಿಸ್ಟಂ ಅಳವಡಿಸಲಾಗಿದೆ. ಹೊರಗಿನ ತಾಪಮಾನಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವ ಹವಾನಿಯಂತ್ರಿತ ಸಾಧನ ಮತ್ತು ಎಚ್ಚರಿಕೆಯ ಗುಂಡಿಯನ್ನು ಭೌತಿಕಗೊಳಿಸಲಾಗಿದೆ. ಇವುಗಳನ್ನು ಸ್ಟಿಯರಿಂಗ್‌ನಲ್ಲೇ ನೀಡಲಾಗಿದೆ.

ಪೋಲೊ ಕಾರಿನ ಮತ್ತೊಂದು ವಿಶೇಷವೆಂದರೆ ರೆಟ್ರೊ ಮಾದರಿಯ ಡಿಜಿಟಲ್ ಡಿಸ್‌ಪ್ಲೇ. ಇದು 1980ರ ಗಾಲ್ಫ್‌ ಎಂಕೆ1 ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಹೀಗಾಗಿ ಕಾಕ್‌ಪಿಟ್‌ಗೆ ಕ್ಲಾಸಿಕ್‌ ಲುಕ್‌ ಲಭಿಸಿದೆ. ಈ ಕಾರಿನ ತಯಾರಿ 2026ರಲ್ಲಿ ಆರಂಭವಾದರೂ, ಮಾರುಕಟ್ಟೆ ಪ್ರವೇಶ 2027ರ ಆರಂಭದಲ್ಲಿ ಆಗಲಿದೆ. ಎರಡು ಬ್ಯಾಟರಿ ಪ್ಲಾಕ್‌ಗಳೊಂದಿಗೆ ಪರಿಚಯವಾಗಲಿರುವ ಪೋಲೊ ಹ್ಯಾಚ್‌ಬ್ಯಾಕ್‌, ಗರಿಷ್ಠ ಚಾರ್ಜ್‌ಗೆ 300ರಿಂದ 450 ಕಿಲೋ ಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿರಲಿದೆ. 85 ಕಿಲೋ ವಾಟ್ ಮತ್ತು 165 ಕಿಲೋ ವಾಟ್‌ನ ಎರಡು ಮೋಟಾರ್ ಆಯ್ಕೆ ಇದರದ್ದು. ಗರಿಷ್ಠ ಟಾರ್ಕ್‌ 310 ನ್ಯೂಟನ್ ಮೀಟರ್ ಇದು ಉತ್ಪಾದಿಸಲಿದೆ. 2ನೇ ಹಂತದ ಆಡ್ಯಾಸ್‌, ಸ್ಟಿಯರಿಂಗ್ ಅಸಿಸ್ಟ್‌, ಲೇನ್ ಅಸಿಸ್ಟ್‌, ಸ್ಪೀಡ್‌ ಅಸಿಸ್ಟ್‌, ಹಲವು ಏರ್‌ಬ್ಯಾಗ್‌ಗಳು, ಎಲ್ಲಾ ಗಾಲಿಗಳಿಗೂ ಡಿಸ್ಕ್‌ ಬ್ರೇಕ್‌ಗಳು, ಇಬಿಡಿ ಜತೆ ಎಬಿಎಸ್, ತುರ್ತು ಸೇವೆಗೆ ಎಸ್‌ಒಎಸ್‌ ಸಿಸ್ಟಂ ಅನ್ನು ಫೋಕ್ಸ್‌ವ್ಯಾಗನ್‌ ಅಳವಡಿಸಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ