ಮೂರು ಎಂಜಿನ್‌ ಮಾದರಿಯಲ್ಲಿ ರೆನೊ ಡಸ್ಟರ್‌ ಭಾರತಕ್ಕೆ ಮರು ಎಂಟ್ರಿ

Renault Duster

ಭಾರತದಲ್ಲಿ ಸದ್ಯ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಕಾರುಗಳಿಗೆ ಭರಪೂರ ಬೇಡಿಕೆ. ಒಂದು ಕಾಲದಲ್ಲಿ ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಪರಿಚಯಿಸಿದ್ದ ಫ್ರಾನ್ಸ್‌ನ ರೆನೊ, ಇದೀಗ ಡಸ್ಟರ್‌ ಹೆಸರಿನಲ್ಲೇ ಹೊಸ ಸ್ವರೂಪದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ.

ಭಾರತದ ಕಾರು ಪ್ರಿಯರ ಸದ್ಯದ ಅಪೇಕ್ಷೆಯಾಗಿರುವ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಎಂಬ ಪರಿಕಲ್ಪನೆಯನ್ನು ತಮ್ಮ ಡಸ್ಟರ್‌ ಎಂಬ ಕಾರಿನ ಮೂಲಕ ಜಾಗೃತಗೊಳಿಸಿದ್ದ ಫ್ರಾನ್ಸ್‌ನ ರೆನೊ, ಇದೀಗ ಮತ್ತದೇ ಹೆಸರಿನೊಂದಿಗೆ ಹೊಸ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

2012ರ ಜುಲೈನಲ್ಲಿ ರೆನೊ ಕಂಪನಿಯು ‘ಡಸ್ಟರ್‌’ ಎಂಬ ಉತ್ಪನ್ನವನ್ನು ಮೊದಲ ಬಾರಿಗೆ ಪರಿಚಯಿಸಿತು. ಹ್ಯಾಚ್‌ಬ್ಯಾಕ್ ಎಂಬ ಪುಟ್ಟ ಕಾರುಗಳು, ಸೆಡಾನ್‌ ಎಂಬ ಉದ್ದನೆಯ ಕಾರುಗಳನ್ನು ಹೊರತುಪಡಿಸಿದರೆ, ಎಸ್‌ಯುವಿ ಎಂಬುದು ‘ಶ್ರೀಮಂತರಿಗೆ ಮಾತ್ರ’ ಎಂಬ ಕಲ್ಪನೆಯಲ್ಲಿ ಮಧ್ಯಮ ವರ್ಗದವರಿದ್ದರು. ಆದರೆ ಡಸ್ಟರ್ ಪ್ರವೇಶವು ಕಾರು ಲೋಕದಲ್ಲೇ ಸಂಚಲನ ಸೃಷ್ಟಿಸಿತು. ಕಾಂಪ್ಯಾಕ್ಟ್‌ ಎಸ್‌ಯುವಿ ಅಥವಾ ಕ್ರಾಸ್ ಓವರ್‌ ವಿಭಾಗ ಎಂಬ ಹೊಸ ಪರಿಭಾಷೆಯನ್ನು ಹುಟ್ಟುಹಾಕಿತು.

ಕಟ್ಟುಮಸ್ತಾದ ದೇಹ, ಭಾರತದ ರಸ್ತೆಗಳಿಗೆ ತೀರಾ ಅಗತ್ಯವಿದ್ದ ಹೆಚ್ಚಿನ ಗ್ರೌಂಡ್‌ ಕ್ಲಿಯರೆನ್ಸ್‌, ಆದರೆ ಸೆಡಾನ್‌ ಕಾರಿನ ಬೆಲೆಯು ಕಾರು ಪ್ರಿಯರನ್ನು ತನ್ನತ್ತ ನೋಡುವಂತೆ ಮಾಡಿತು. ಉತ್ತಮ ಟಾರ್ಕ್‌ ಹೊಂದಿದ್ದ ಹಾಗೂ ಡೀಸೆಲ್‌ ಎಂಜಿನ್‌ನ ಇಂಧನ ಕ್ಷಮತೆಯೂ ಹುಬ್ಬೇರಿಸಿತ್ತು. ಹೊರ ಕವಚಕ್ಕೆ ಪೂರಕವಾದ ಮೊನೊಕಾಕ್ ಚಾಸೀಸ್‌ ಅನ್ನು ಪರಿಚಯಿಸಿದ ರೆನೊ, ಪ್ರಯಾಣಿಕರಿಗೆ ಹೆಚ್ಚಿನ ಆರಾಮ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿತ್ತು.

ಸ್ಪರ್ಧಿಗಳೇ ಇಲ್ಲದ ಕ್ಷೇತ್ರಕ್ಕೆ ಕಾಲಿಟ್ಟ ರೆನೊ ಮಾಸಿಕ 5 ಸಾವಿರದಿಂದ 6 ಸಾವಿರ ಡಸ್ಟರ್‌ ಮಾರುವಷ್ಟು ಬೇಡಿಕೆಯನ್ನು ಸೃಷ್ಟಿಸಿಕೊಂಡಿತು. ಆ ಮೂಲಕ ಕಾರು ಖರೀದಿಸುವವರ ಅಪೇಕ್ಷೆಯನ್ನೇ ಬದಲಿಸಿದ್ದು ಮಾತ್ರವಲ್ಲ, ಮುಂದೆ ಹ್ಯುಂಡೇ ಕ್ರೇಟಾ, ನಿಸ್ಸಾನ್‌ ಟೆರಾನೊ, ಮಾರುತಿ ಎಸ್–ಕ್ರಾಸ್‌, ವಿಟಾರಾ ಬ್ರೀಜಾ, ಕಿಯಾ ಸೆಲ್ಟೋಸ್‌ ಎಂಬ ಕಾರುಗಳು ಮಾರುಕಟ್ಟೆ ಪ್ರವೇಶಿಸಲು ಕಾರಣವಾಗಿದ್ದು ಇದೇ ಡಸ್ಟರ್.

ಬದಲಾದ ಕಾಲಕ್ಕೆ ಮತ್ತು ಹೆಚ್ಚುತ್ತಿದ್ದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಬದಲಾವಣೆಗಳನ್ನು ಮಾಡುವಲ್ಲಿ ಡಸ್ಟರ್‌ ಅಷ್ಟಾಗಿ ಆಸಕ್ತಿ ತೋರದಿದ್ದದ್ದು ಅದಕ್ಕೆ ದುಬಾರಿಯಾಗಿತ್ತು. ಆದರೆ ಭಾರತದಲ್ಲಿನ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಬೆಳವಣಿಗೆಯನ್ನು ಗಮನಿಸಿದ ರೆನೊ, ಇದೀಗ ಅದೇ ಡಸ್ಟರ್‌ ಹೆಸರಿನಲ್ಲಿ ಎಸ್‌ಯುವಿ ಬಿಡುಗಡೆ ಮಾಡಿದೆ. ಹೊರ ಭಾಗದಲ್ಲಿ ಸಾಕಷ್ಟು ಬದಲಾವಣೆ, ಒಳಾಂಗಣದಲ್ಲೂ ಆಧುನಿಕ ಸೌಲಭ್ಯಗಳೊಂದಿಗೆ ಮತ್ತೆ ತನ್ನ ಅಸ್ತಿತ್ವದ ಹುಡುಕಾಟಕ್ಕೆ ಮುಂದಾಗಿದೆ.

ಮೂರು ಎಂಜಿನ್‌ ಮಾದರಿಯಲ್ಲಿ ಡಸ್ಟರ್

ಮರು ಪ್ರವೇಶ ಪಡೆದಿರುವ ಡಸ್ಟರ್‌ ಅನ್ನು ಮೂರು ಎಂಜಿನ್ ಮಾದರಿಯಲ್ಲಿ ರೆನೊ ಪರಿಚಯಿಸಿದೆ. 1ಲೀ., 1.3ಲೀ. ಹಾಗೂ 1.8ಲೀ ಹೈಬ್ರಿಡ್‌ ಟಿಸಿಇ 160 ಎಂಬ ಎಂಜಿನ್‌ ಇದರದ್ದು. ಎಲ್ಲವೂ ಪೆಟ್ರೋಲ್ ಮಾದರಿಯ ಕಾರುಗಳಾಗಿವೆ. ಹೈಬ್ರಿಡ್‌ ಮಾದರಿಯಲ್ಲಿ ಎರಡು ಮೋಟಾರ್‌ಗಳನ್ನು ನೀಡಲಾಗಿದ್ದು, ನಗರ ಪ್ರದೇಶದಲ್ಲಿ ಶೇ 80ರಷ್ಟು ಬ್ಯಾಟರಿಯಿಂದಲೇ ಚಾಲಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. 360 ಡಿಗ್ರಿ ಕ್ಯಾಮೆರಾದೊಂದಿಗೆ ಎಡ್ಯಾಸ್, ಏರ್‌ಬ್ಯಾಗ್ ಜತೆಗೆ 35 ಸುರಕ್ಷತಾ ಸಾಧನವನ್ನು ಕಂಪನಿ ಅಳವಡಿಸಿದೆ. ಇದಕ್ಕಾಗಿ ಡಸ್ಟರ್‌ಗೆ ಪಂಚತಾರಾ ಸುರಕ್ಷತಾ ಮಾನ್ಯತೆ ದೊರೆತಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಒಳಾಂಗಣದಲ್ಲಿ ಗೂಗಲ್ ಅಸಿಸ್ಟೆನ್ಸ್‌ ಇರುವ ಇನ್ಫೊಟೈನ್ಮೆಂಟ್‌ ಸಿಸ್ಟಂ, ವೆಂಟಿಲೇಟೆಡ್ ಸೀಟ್‌, ಬೃಹತ್ ಪ್ಯಾನಾರೊಮಿಕ್ ಸನ್‌ರೂಫ್‌ ನೀಡಲಾಗಿದೆ. 780 ಲೀಟರ್‌ ಬೂಟ್‌ ಸ್ಪೇಸ್‌ ಕೂಡಾ ಹೊಸ ಡಸ್ಟರ್‌ ಹೊಂದಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ