ಇದು ಬರೋಬ್ಬರಿ 35 ವರ್ಷಗಳ ಹಿಂದಿನ ಕಥೆ. 1990ರಲ್ಲಿ ಮಾರುತಿಯ ಪುಟಾಣಿ ಕಾರುಗಳದ್ದೇ ಕಾರುಬಾರಾಗಿತ್ತು. ಆ ಹೊತ್ತಿನಲ್ಲಿ ಅಪಾರ ದೈಹಿಕ ಸಾಮರ್ಥ್ಯದ ಕಾರಿನ ಪ್ರವೇಶವಾಯಿತು. ಎತ್ತರದ ನಿಲುವು, ಸದೃಢ ದೇಹ, ಅಧಿಕ ಶಕ್ತಿ ನೋಡುಗರನ್ನು ಮೊದಲ ನೋಟದಲ್ಲೇ ಸೆಳೆದಿತ್ತು. ಟಾಟಾ ಸಿಯಾರಾ ಎಂಬ ಹೆಸರಿನ ಈ ಚಿರ ಯವ್ವನದ ಹೆಸರಿಗೆ ಈಗಲೂ ಅದೇ ಬೇಡಿಕೆ.
ಸ್ವದೇಶದಲ್ಲಿ ನಿರ್ಮಾಣಗೊಂಡ ಮೊದಲ ಎಸ್‌ಯುವಿ ಎಂಬ ಹೆಗ್ಗಳಿಕೆಯ ಟಾಟಾ ಸಿಯಾರಾವನ್ನು ಅಂದು ಟೆಲ್ಕೊ (ಟಾಟಾ ಎಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿ) ವಿನ್ಯಾಸಗೊಳಿಸಿ, ಅಭಿವೃದ್ಧಿ ಮಾಡಿತ್ತು. ಹೊಸತನ್ನು ಅನ್ವೇಷಿಸುವ ಭಾರತೀಯರಲ್ಲಿ ಹಲವರು ಸಿಯಾರಾ ಮೊರೆ ಹೋದರು.
ಇದೀಗ ಸಿಯಾರಾ ಅದೇ ಸ್ವರೂಪದಲ್ಲಿ ಆದರೆ ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಮತ್ತೆ ಪರಿಚಯಗೊಂಡಿದೆ. ಇದೇ ವರ್ಷದ ಆರಂಭದಲ್ಲಿ ನಡೆದ ಭಾರತ್ ಮೊಬಿಲಿಟಿ ಆಟೊ ಎಕ್ಸ್‌ಪೊದಲ್ಲಿ ಟಾಟಾ ಸಿಯಾರಾ ಹೊಸ ರೂಪದಲ್ಲಿ ಪರಿಚಯಗೊಂಡಿತು. ಭಾರತದಲ್ಲಿ ಸದ್ಯ ಬೇಡಿಕೆ ಇರುವ ಎಸ್‌ಯುವಿ ಮಾದರಿಗೆ ಇದು ಹೊಸ (ಮರು) ಸೇರ್ಪಡೆಯಾಗಿದ್ದು, ಹಲವರು ಇದರ ಬಿಡುಗಡೆಗಾಗಿ ಕಾದಿದ್ದಾರೆ.

ಮೂರು ಬಾಗಿಲ ಸಿಯಾರಾದಲ್ಲಿ ಏನೆಲ್ಲಾ ವಿಶೇಷ
ಅದೇ ಬಾಕ್ಸಿ ಬಾಹ್ಯನೋಟ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ವಿಶಿಷ್ಟವಾದ ಮೂರು ಬಾಗಿಲುಗಳ ಪರಿಕಲ್ಪನೆ ಭಾರತದಲ್ಲಿ ಮತ್ತೆ ಸದ್ದು ಮಾಡುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿವೆ. ಕಿಟಕಿಗಳ ಬದಲಿಗೆ ಹಿಂದಿನ ಸಿಯಾರಾದ ಗ್ಲಾಸ್‌ಹೌಸ್ ವಿನ್ಯಾಸ ಇದರಲ್ಲೂ ಅಳವಡಿಸಲಾಗಿದೆ. ಇಂದಿನ ಪ್ಯಾನಾರೊಮಿಕ್ ಸನ್‌ರೂಫ್ ಬೇಡಿಕೆಗೆ ಪರ್ಯಾಯವಾಗಿ ಈ ಗ್ಲಾಸ್‌ಹೌಸ್ ಹೊಸ ಬೇಡಿಕೆ ಸೃಷ್ಟಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಹಿಂದಿನ ಸಯಾರಾ ಕೂಡಾ ಮೂರು ಬಾಗಿಲಿನ ಕಾರಾಗಿತ್ತು. ಆದರೆ ಹಿಂಬದಿ ಸವಾರರು ಅಷ್ಟು ಆರಾಮದಾಯಕ ಪ್ರಯಾಣವನ್ನು ಅನುಭವಿಸುತ್ತಿರಲಿಲ್ಲ. ಬೇಸಿಗೆಯಲ್ಲಿ ಕಾರಿನ ಗಾಜಿನ ಶಾಖವು ಒಳಭಾಗದಲ್ಲಿ ಉಷ್ಣತೆ ಹೆಚ್ಚಿಸುತ್ತಿತ್ತು. ಹೀಗಾಗಿ 2005ರ ಹೊತ್ತಿಗೆ ಸಿಯಾರಾ ಬೇಡಿಕೆಯೂ ತಗ್ಗಿತ್ತು.
ಆ ಹೊತ್ತಿಗೆ ಟಾಟಾ ಕಂಪನಿಯು ಸಫಾರಿಯನ್ನು ಪರಿಚಯಿಸಿತು. ಹೀಗಾಗಿ ಶೋರೂಂಗಳಿಂದ ಸಿಯಾರಾ ಮಾಯವಾಯಿತು. ಆದರೆ ಜನರ ಮನಸ್ಸಿನಿಂದ ಅದು ಮಾಸಲಿಲ್ಲ.
ಮತ್ತೆ ಚಿಗುರೊಡೆಯಿತು ಸಿಯಾರಾ ಹೊಂದುವ ಕನಸು
ಆಗ ಸಿಯಾರಾ ಡ್ರೈವ್ ಮಾಡಿದವರಿಗೆ ಮುಂದೊಂದು ದಿನ ಮತ್ತೆ ಅಂತದ್ದೇ ಕಾರನ್ನು ಹೊಂದುವ ಬಯಕೆ ಸುಪ್ತವಾಗಿತ್ತು. ಈಗ ಅದು ಮತ್ತೆ ಚಿಗುರೊಡೆಯುವ ಕಾಲ ಬಂದಿದೆ. ಸಿಯಾರಾ ಮತ್ತದೇ ಲುಕ್‌ನಲ್ಲಿ, ಆದರೆ ಆಧುನಿಕ ಸ್ಪರ್ಶದೊಂದಿಗೆ ಮರಳುತ್ತಿದೆ.
ಅದ್ಭುತವಾಗಿ ಸಿಯಾರಾ ಮರಳಿ ಬರುತ್ತಿರುವುದಾಗಿ ಟಾಟಾ ಖಚಿತಪಡಿಸಿದೆ. ಇದರ ಮಾದರಿಯನ್ನು ಈಗಾಗಲೇ ಭಾರತ್ ಮೊಬಿಲಿಟಿ ಆಟೊ ಎಕ್ಸ್‌ಪೋನಲ್ಲಿ ಪ್ರದರ್ಶಿಸಿದೆ. ಅಲ್ಲಲ್ಲಿ ಸಿಯಾರಾ ಪರೀಕ್ಷಾರ್ಥ ಸಂಚಾರ ನಡೆಸುವಾಗಲೂ ಕಾರು ಪ್ರಿಯರ ಕಣ್ಣಿಗೆ ಬಿದ್ದು, ಅವುಗಳು ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿವೆ.
ಆಧುನಿಕ ಸಿಯಾರಾ ಅದೇ ದೊಡ್ಡ ಗಾಜಿನ ಕಿಟಕಿ ಮತ್ತು ಅದೇ ಸದೃಢ ಹೊರಕವಚವನ್ನು ಹೊಂದಿರುವುದು ಇದರಿಂದ ಗೊತ್ತಾಗಿದೆ. ಉಳಿದಂತೆ ಎಲೆಕ್ಟ್ರಿಕ್ ಪವರ್‌ಟ್ರೈನ್, ಆಧುನಿಕ ಸುರಕ್ಷತಾ ವ್ಯವಸ್ಥೆ ಹಾಗೂ ವಿಲಾಸಿ ಒಳಾಂಗಣ ವಿನ್ಯಾಸವನ್ನು ಸಿಯಾರಾದಲ್ಲಿ ಅಳವಡಿಸಿರುವ ಮಾಹಿತಿ ಲಭ್ಯವಾಗಿದೆ.