ಕಾರು ಖರೀದಿಸಬೇಕೆಂದರೆ ಅದು ಎಸ್‌ಯುವಿ ಆಗಿರಬೇಕು. ಅದರಲ್ಲಿ ಸನ್‌ರೂಫ್ ಇರಬೇಕು. ಬರೀ ಸನ್‌ರೂಫ್ ಅಲ್ಲ ಪ್ಯಾನಾರೊಮಿಕ್ ಸನ್‌ರೂಫ್ ಆಗಿರಬೇಕು. ಇವೆಲ್ಲವೂ ಭಾರತೀಯ ಕಾರು ಪ್ರಿಯರ ಅತಿ ಪ್ರಮುಖ ಬೇಡಿಕೆಗಳು. ಈ ಬೇಡಿಕೆಗಳಿಗೆ ಆಧುನಿಕ ಸ್ಪರ್ಶ ನೀಡಿದೆ ಚೀನಾದ ಷವೋಮಿ.
ಷವೋಮಿ ಎಂಬ ಹೆಸರು ಕೇಳಿದರೆ ಭಾರತೀಯರಿಗೆ ಸ್ಮಾರ್ಟ್ ಫೋನ್ ನೆನಪಾಗುವುದು ಸಾಮಾನ್ಯ. ಆದರೆ ವಿದ್ಯುತ್ ಚಾಲಿತ ಕಾರು ತಯಾರಿಕೆಯಲ್ಲೂ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಷವೋಮಿ, ಇದೀಗ ಆ್ಯಂಬಿಲೈಟ್ ಕಲ್ಪಿಸುವ ಸ್ಮಾರ್ಟ್ ಎಲೆಕ್ಟ್ರಾನಿಕ್ ಸನ್‌ರೂಫ್ ಅನ್ನು ತನ್ನ YU7 ಎಸ್‌ಯುವಿ ಕಾರಿನಲ್ಲಿ ಅಳವಡಿಸಿದೆ.

ಮುಂದಿನ ತಲೆಮಾರಿನ ಸ್ಮಾರ್ಟ್ ಸನ್‌ರೂಫ್ ಇದಾಗಿದ್ದು, ಸೂರ್ಯನ ಬೆಳಕನ್ನು ವ್ಯವಸ್ಥಿತವಾಗಿ ನಿಯಂತ್ರಿಸುವ ತಂತ್ರಜ್ಞಾನ ಇದಾಗಿದ್ದು, ಇದಕ್ಕೆ ಎಲೆಕ್ಟ್ರೊಕ್ರೊಮಿಕ್ ತಂತ್ರಜ್ಞಾನ ಅಳವಡಿಸಲಾಗಿದೆ. ಇದು ಶೇ 99.85ರಷ್ಟು ಬೆಳಕನ್ನು ನಿಯಂತ್ರಿಸುವ ಸಾಮರ್ಥ್ಯ ಇದಕ್ಕಿದೆ. ಸೂರ್ಯನ ಪ್ರಖರ ಬೆಳಕು ಮತ್ತು ಶಾಖವನ್ನೂ ಇದು ತಡೆದು, ಕಾರಿನೊಳಗೆ ಆಹ್ಲಾದಕರ ಅನುಭೂತಿಯನ್ನು ನೀಡುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ಒಳಾಂಗಣದಲ್ಲಿ ಹಿತಕರ ಅನುಭವದೊಂದಿಗೆ, ಸರಳ ಹಾಗೂ ಸುಂದರ ವಿನ್ಯಾಸದ ಒಳಾಂಗಣವನ್ನು ಷವೋಮಿ ಸಿದ್ಧಪಡಿಸಿದೆ.
ಇಂಥ ವಿಶೇಷ ಆ್ಯಂಬಿಲೈಟ್ ಎಂಬ ಉತ್ಕೃಷ್ಟ ತಂತ್ರಜ್ಞಾನದ ಮೇಲ್ಚಾವಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಗಾಗಲೇ ಇವುಗಳನ್ನು ಗೋಲಾಕಾರದ ಮತ್ತು ಪ್ಯಾನಾರೊಮಿಕ್ ಸನ್‌ರೂಫ್‌ಗಳಲ್ಲಿ ಬಳಸಲಾಗಿದೆ. ವಾಹನ ಕ್ಷೇತ್ರದ ಗುಣಮಟ್ಟದ ಮಾನದಂಡಗಳಿಗೆ ಇವುಗಳು ಸೂಕ್ತ ಎಂದೂ ಸಾಬೀತಾಗಿದೆ. 2025ರ ಮೇ ವರೆಗೂ ಕಂಪನಿಯು ಸುಮಾರು 10 ಸಾವಿರ ಇಂಥ ವಿಶೇಷ ತಂತ್ರಜ್ಞಾನದ ಪ್ಯಾನಾರೊಮಿಕ್ ಸನ್‌ರೂಫ್ ತಯಾರಿಸಿದೆ.
ಷವೋಮಿ YU7 ಸನ್‌ರೂಪ್‌ಗಳು ಕೇವಲ ಒಂದು ಸನ್‌ರೂಫ್ ಅಷ್ಟೇ ಆಗಿರದೆ, ಸ್ಮಾರ್ಟ್ ಕೂಡಾ ಆಗಿದೆ. ಸುಸ್ಥಿರ ಉಪಕರಣಗಳನ್ನು ಬಳಸಲಾಗಿದೆ. ಚಾಕಚಕ್ಯತೆಯ, ಇಂಧನ ಮಿತವ್ಯಯ ತಂತ್ರಜ್ಞಾನದ ಸಾಧನ ಇದು ಎಂದು ಕಂಪನಿ ಹೇಳಿಕೊಂಡಿದೆ. ಎಲೆಕ್ಟ್ರೊಕ್ರೊಮಿಕ್ ಗ್ಲಾಸ್ ಬಳಸಲಾಗಿದ್ದು, ಇದು ವಾಹನ ಕ್ಷೇತ್ರದ ಭವಿಷ್ಯದ ಉಪಕರಣವಾಗಿದೆ.