ಮಸೆರಾಟಿ ಗ್ರೆಕಾಲೆ ಅನ್ನು ಸ್ಪೋರ್ಟ್ ಕಾರು ಎನ್ನಬೇಕೇ ಅಥವಾ ವಿಲಾಸಿ ಸೆಡಾನ್ ಎನ್ನಬೇಕೆ ಅಥವಾ ಇದು ಎಸ್‌ಯುವಿ ಹೌದೇ? ಎಂದು ಗೊಂದಲಕ್ಕೀಡಾಗುವಂತೆ ಕಂಪನಿ ವಿನ್ಯಾಸ ಮಾಡಿದೆ. ತೀರಾ ಭಿನ್ನ ಎನ್ನಬಹುದಾದ ವಿಲಾಸಿ ವಿನ್ಯಾಸ ಇದರದ್ದು. ಹೊರ ನೋಟವಾಲೀ ಅಥವಾ ನೀಡಿರುವ ಸೌಲಭ್ಯವಾಗಲಿ ಗ್ರೆಕಾಲೆ ಭಾರತದ ಅಚ್ಚುಮೆಚ್ಚಿನ ಲಕ್ಷುರಿ ಕಾರಾಗುವ ಲಕ್ಷಣವನ್ನು ಆರಂಭದಲ್ಲೇ ತೋರಿಸಿದೆ.
ಇಟಲಿಯ ಮಸೆರಾಟಿ ಕಾರು ತಯಾರಿಕಾ ಬ್ರಾಂಡ್ ಈ ಹಿಂದೆ ಲೆವಾಂಟೆ ಎಂಬ ಎಸ್‌ಯುವಿ ಪರಿಚಯಿಸಿತ್ತು. ಈ ವರ್ಷದ ಆರಂಭದಲ್ಲಿ ಇದರ ತಯಾರಿಕೆಯನ್ನು ಕಂಪನಿ ಸ್ಥಗಿತಗೊಳಿಸಿತು. ಲೆವಾಂಟೆಗೆ ಹೋಲಿಸಿದರೆ ಗ್ರೆಕಾಲೆ ಗಾತ್ರ ಅರ್ಧದಷ್ಟು ಕಡಿಮೆ. ಇದನ್ನು ಇತರ ಕಾರಿಗೆ ಹೋಲಿಸಬಹುದಾದರೆ ಪೋಷೆ ಮಕಾನ್ ಅಥವಾ ಕ್ಯಾನ್ನೆ ಪರಿಗಣಿಸಬಹುದು. ಜರ್ಮನಿಯ ಕಾರುಗಳ ಪಾರುಪತ್ಯದ ನಡುವೆ ಇಟಲಿಯ ಗ್ರೆಕಾಲೆ ಪೈಪೋಟಿ ನೀಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಇದರ ಮೊದಲ ನೋಟದಲ್ಲೇ ಹೇಳಬಹುದು.

ಮಸೆರಾಟಿಯಿಲ್ಲಿ ಮಾತ್ರ ಸಿಗಬಹುದಾದ ಹಲವು ವಸ್ತುಗಳು ಇದರಲ್ಲೂ ಇವೆ. ಅದರಲ್ಲಿ ಪ್ರಮುಖವಾಗಿ ಕಾನ್‌ಕೇವ್ ಗ್ರಿಲ್, ಇಕ್ಕೆಲಗಳಲ್ಲಿ ಮೂರು ವೆಂಟ್‌ಗಳು, ಡಿ–ಪಿಲ್ಲರ್, ತನ್ನದೇ ವಿಶಿಷ್ಟ ಲೊಗೊ ಇತ್ಯಾದಿಗಳಿವೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಮಸೆರಾಟಿಯನ್ನು ರಸ್ತೆಯಲ್ಲಿ ಕಣ್ಣಿಗೆ ಕಟ್ಟುವಂತೆ ಕಂಪನಿ ವಿನ್ಯಾಸ ಮಾಡಿದೆ. ಅದರಲ್ಲೂ ಭಾರತೀಯರ ಅಪೇಕ್ಷೆಗಳನ್ನು ಗ್ರೆಕಾಲೆ ಮೂಲಕ ಈಡೇರಿಸಿದಂತಿದೆ.
ಮಸೆರಾಟಿ ಗ್ರೆಕಾಲೆ ₹1.51 ಕೋಟಿಯಿಂದ ₹2.36 ಕೋಟಿ ಬೆಲೆಯಲ್ಲಿ ಲಭ್ಯ. 2.0 ಲೀಟರ್ ಮೊಡೆನಾ ಪೆಟ್ರೋಲ್ ಎಂಜಿನ್ ಹಾಗೂ 3.0 ಲೀಟರ್ ಟ್ರೊಫಿಯೊ ವಿ6 ಪೆಟ್ರೋಲ್ ಎಂಜಿನ್ ಅನ್ನು ಇದು ಹೊಂದಿದೆ. ಪ್ರತಿ ಲೀಟರ್‌ಗೆ 9ರಿಂದ 10 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ.
5 ಬಾಗಿಲುಗಳ ಗ್ರೆಕಾಲೆಯೊಳಗೆ 12.3 ಇಂಚುಗಳ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಸುರಕ್ಷತೆಗೆ 6 ಏರ್‌ಬ್ಯಾಗ್‌ಗಳು ಪ್ರಮುಖವು.
ಕ್ವಾಡ್ ಎಕ್ಸಾಸ್ಟ್ ನೀಡಿರುವುದರಿಂದ ಹಿಂಬದಿಯಲ್ಲೂ ವಿನ್ಯಾಸವನ್ನು ಇನ್ನಷ್ಟು ಉತ್ತಮಪಡಿಸಿರುವ ಎಲ್ಲಾ ಅಂಶಗಳೂ ಇದರಲ್ಲಿವೆ. ಇಂಡಿಕೇಟರ್, ಬಂಪರ್ ಎಲ್ಲವೂ ಕಾರಿನ ಹಿಂಬದಿಯ ಅಂದವನ್ನು ಹೆಚ್ಚಿಸಿವೆ. 3200 ಜಿಟಿಯ ಸಿಗ್ನೇಚರ್ ಎಲ್‌ಇಡಿ ದೀಪಗಳಿಗೆ ಹೋಲಿಸುವಂತಿವೆ. ನೋಟವನ್ನೇ ಆಕರ್ಷಕವನ್ನಾಗಿಸಿರುವ ಕಂಪನಿಯ ವಿನ್ಯಾಸದಲ್ಲಿ ಗರಿಷ್ಠ ಅಂಕ ಪಡೆದಿದೆ.

ಗ್ರೆಕಾಲೆ ಒಳ ವಿನ್ಯಾಸ ಮತ್ತು ಸೌಕರ್ಯ
ಮಸೆರಾಟಿಯ ಹಿಂದಿನ ವೈಭವ ಹಾಗೂ ಇಂದಿನ ತಲೆಮಾರಿನ ವಿನ್ಯಾಸವನ್ನು ಹದವಾಗಿ ಗ್ರೆಕಾಲೆಯಲ್ಲಿ ಅಳವಡಿಸಿದೆ. ಇಟಲಿಯ ನುರಿತ ಕುಶಲಕರ್ಮಿಗಳ ಕೈಚಳಕ ಈ ಕಾರಿನಲ್ಲಿ ಕಾಣಸಿಗುತ್ತದೆ. ಲೆದರ್ ಕ್ಯಾಬಿನ್ ಕಾರಿನ ಒಳಾಂಗಣವನ್ನು ಶ್ರೀಮಂತಗೊಳಿಸಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಹಿಂದೆ ಬಳಸುತ್ತಿದ್ದ ಕ್ಲಾಸಿಕ್ ಅನಲಾಗ್ ಗಡಿಯಾರ ಘನತೆ ಹೆಚ್ಚಿಸಿದೆ. ಜಿ–ಮೀಟರ್, ಕಂಪಾಸ್, ಬ್ರೇಕ್ ಮತ್ತು ಥ್ರಾಟೆಲ್ ಪ್ರಶರ್‌ಗಳು ಪರದೆಯಲ್ಲೇ ಕಾಣಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಕಾರಿನಲ್ಲಿ ಗುಂಡಿಗಳು ಹೆಚ್ಚು ಇವೆ. ಆದರೆ ಅವು ಯಾವುವೂ ಧ್ವನಿ ಹೆಚ್ಚಿಸುವ ಇಳಿಸುವ ಗುಂಡಿಗಳಲ್ಲ. ಬದಲಿಗೆ ಸ್ಟಾರ್ಟ್, ಸ್ಟಾಪ್, ಡ್ರೈವ್ ಮೋಡ್ ಇತ್ಯಾದಿ ಆಯ್ಕೆಗಳಿವೆ ಗುಂಡಿಗಳನ್ನು ನೀಡಲಾಗಿದೆ. ಕಾರಿನ ಮಧ್ಯದಲ್ಲಿ ಗೇರ್ ಲಿವರ್ ಇಲ್ಲ. ಬದಲಿಗೆ ಮರ್ಸಿಡೀಸ್‌ನಂತೆ ಸ್ಟಿಯರಿಂಗ್ ವೀಲ್ ಕೆಳಭಾಗದಲ್ಲಿ ನೀಡಲಾಗಿದೆ.
ಪ್ಯಾನಾರಮಿಕ್ ಸನ್‌ರೂಫ್, ಮುಂಭಾಗದ ಆಸನಗಳಲ್ಲಿ ಕೂಲಿಂಗ್ ಮತ್ತು ಹೀಟಿಂಗ್ ಸೌಕರ್ಯ, 360 ಡಿಗ್ರಿ ಕ್ಯಾಮೆರಾ, ಮೂರು ವಲಯಗಳ ಕ್ಲೈಮೆಟ್ ಕಂಟ್ರೋಲ್ ಹಾಗೂ ಇನ್ನೂ ಹಲವು ಸೌಕರ್ಯಗಳು ಲಭ್ಯ.

ಕಾರಿನೊಳಗೆ ಹೆಡ್‌ರೂಂ ಹಾಗೂ ಕಾಲು ಚಾಚಲು ಹೆಚ್ಚು ಸ್ಥಳಾವಕಾಶ ನೀಡಲಾಗಿದೆ. ಬ್ಯಾಕ್‌ರೆಸ್ಟ್ ಒಳಗೊಂಡಂತೆ ಚಾಲಕ ಹಾಗೂ ಪ್ರಯಾಣಿಕರ ಆರಾಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ. 535 ಲೀಟರ್‌ನ ಬೂಟ್ ಸ್ಪೇಸ್ ನೀಡಲಾಗಿದೆ.
3.0 ಲೀಟರ್‌ನ ಟರ್ಬೊ ವಿ6 ಪೆಟ್ರೋಲ್ ಎಂಜಿನ್ 530 ಅಶ್ವ ಶಕ್ತಿ ಉತ್ಪಾದಿಸಬಲ್ಲದು. 2.0 ಲೀಟರ್‌ನ ಎಂಜಿನ್ 300ರಿಂದ 330 ಅಶ್ವಶಕ್ತಿ ಉತ್ಪಾದಿಸಬಲ್ಲದು. ಗರಿಷ್ಠ 6 ಸಾವಿರ ಆರ್‌ಪಿಎಂ ಇದು ಉತ್ಪಾದಿಸುತ್ತಾ ಪ್ರತಿ ಗಂಟೆಗೆ 0ಯಿಂದ 100 ಕಿ.ಮೀ. ವೇಗವನ್ನು 5.6 ಸೆಕೆಂಡುಗಳಲ್ಲಿ ಕ್ರಮಿಸಲಿದೆ. ಗರಿಷ್ಢ 240 ಕಿ.ಮೀ. ವೇಗದಲ್ಲಿ ಮಸೆರಾಟಿ ಗ್ರೆಕಾಲೆ ಚಲಿಸಲಿದೆ. 8 ಸ್ಪೀಡ್‌ನ ಝಡ್‌ಎಫ್ ಗೇರ್‌ಬಾಕ್ಸ್ ನೀಡಲಾಗಿದೆ.