ಟೊಯೊಟಾ ಕಿರ್ಲೊಸ್ಕರ್ ಮೋಟಾರ್ಸ್ ತನ್ನ ಜನಪ್ರಿಯ ಅರ್ಬನ್ ಕ್ರೂಸರ್, ಹೈರೈಡರ್ ಎಸ್‌ಯುವಿ ಕಾರಿನಲ್ಲಿ ‘ಪ್ರೆಸ್ಟೀಜ್ ಪ್ಯಾಕೇಜ್’ ಅಳವಡಿಸಿ ಬಿಡುಗಡೆ ಮಾಡಿದೆ.
ಕಾರಿನ ಸೌಂದರ್ಯ ಹೆಚ್ಚಿಸುವುದರ ಜತೆಗೆ, ಗ್ರಾಹಕರು ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯ ನೀಡುವ ಗುರಿಯನ್ನು ಕಂಪನಿ ಹೊಂದಿದೆ. ಇದೇ ಜುಲೈನಿಂದ ಮಾರುಕಟ್ಟೆಗೆ ದಾಂಗುಡಿ ಇಟ್ಟಿದೆ. ಇದರಲ್ಲಿ ಡೀಲರ್ ಫಿಟ್ಟೆಡ್ ಆಕ್ಸಸರಿಗಳು ಇವೆ. ಆದರೆ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುವ ಪ್ರಸ್ಟೀಜ್ ಪ್ಯಾಕೇಜ್ ಪಡೆಯಬೇಕೆಂದರೆ ಟೊಯೊಟಾ ಡೀಲರ್‌ಗಳನ್ನು ತಕ್ಷಣ ಭೇಟಿಯಾಗಬೇಕು.
ಏನಿದೆ ಈ ಪ್ರೆಸ್ಟೀಜ್ ಪ್ಯಾಕೇಜ್‌ನಲ್ಲಿ…?
ವಿಶೇಷ ಸೌಕರ್ಯಗಳುಳ್ಳ ಈ ಪ್ರೆಸ್ಟೀಜ್ ಪ್ಯಾಕೇಜ್‌ನಲ್ಲಿ ಕ್ರೋಮ್ ಫಿನಿಶ್ಡ್ ಬಾಡಿ ಕ್ಲಾಡಿಂಗ್ ಲಭ್ಯ. ಡೋರ್ ವೈಸರ್, ಬಂಪರ್ ಗಾರ್ನಿಶ್ ಮತ್ತು ವಿಶೇಷವಾದ ಬ್ಯಾಡ್ಜ್ ಕೂಡಾ ಅಳವಡಿಸಲಾಗಿದೆ. ಉಳಿದಂತೆ ಹೆಡ್‌ಲ್ಯಾಂಪ್ ಮತ್ತು ಟೇಲ್ ಲೈಟ್ ಗಾರ್ನಿಶ್ ಮಾಡಲಾಗಿದೆ. ಹೂಡ್ ಎಂಬ್ಲಮ್, ಫೆಂಡರ್ ಗಾರ್ನಿಶ್ ಮತ್ತು ಹಿಂಬದಿಯ ಬಾಗಿಲನ್ನೂ ಗಾರ್ನಿಶ್ ಮಾಡಲಾಗಿದೆ.
ಶಕ್ತಿಶಾಲಿ ಹೈಬ್ರಿಡ್ ಮತ್ತು ಲಘು ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಅರ್ಬನ್ ಕ್ರೂಸರ್ ಹೈರಡರ್ ಲಭ್ಯ. ಶಕ್ತಿಶಾಲಿ ಹೈಬ್ರಿಡ್ ಮಾದರಿಯಲ್ಲಿ 1.5 ಲೀಟರ್ ಅಟ್ಕಿನ್‌ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಇದ್ದು, ಇದಕ್ಕೆ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಲಘು ಹೈಬ್ರಿಡ್ ಮಾದರಿಯಲ್ಲಿ ಸುಜುಕಿಯ 1.5 ಲೀಟರ್ ಕೆ ಸಿರೀಸ್ ಎಂಜಿನ್ ಅಳವಡಿಸಲಾಗಿದೆ. ಎರಡಲ್ಲೂ 5 ಸ್ಪೀಡ್ ಮ್ಯಾನುಯಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಿವೆ.
ಇವುಗಳೊಂದಿಗೆ ಪ್ಯಾನಾರೊಮಿಕ್ ಸನ್‌ರೂಫ್ ನೀಡಲಾಗಿದೆ. ವೆಂಟಿಲೇಟೆಡ್ ಲೆದರ್ ಸೀಟ್‌ಗಳು, 9 ಇಂಚಿನ ಟಚ್‌ಸ್ಕ್ರೀನ್ ಮತ್ತು ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೊ ಮತ್ತು ಆ್ಯಪಲ್ ಕಾರ್‌ಪ್ಲೇ ಸೌಲಭ್ಯ ಇದೆ. ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆ್ಯಂಬಿಯಂಟ್ ಲೈಟಿಂಗ್ ಸೌಕರ್ಯವೂ ಇದೆ.
ಹಿಂಬದಿ ಆಸನದಲ್ಲಿ ಕೂರುವವರಿಗೆ ಇನ್ನೂ ಹೆಚ್ಚಿನ ಆರಾಮ ನೀಡಲಾಗಿದೆ. ಹಿಂಬದಿ ಆಸನಗಳೂ ಹಿಂದೆ ಆರಾಮವಾಗಿ ಬಾಗುಂತೆ ರಿಕ್ಲೇನಿಂಗ್ ಸೌಕರ್ಯ ನೀಡಲಾಗಿದೆ. ಹಿಂಬದಿ ಪ್ರಯಾಣಿಕರ ಆರಾಮಕ್ಕೆ ಹವಾನಿಯಂತ್ರಿತ ವೆಂಟ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, 60:40 ಸ್ಪ್ಲಿಟ್ ಫೋಲ್ಡಿಂಗ್ ಸೀಟ್‌ಗಳನ್ನು ನೀಡಲಾಗಿದೆ. ಸುರಕ್ಷತೆಗೆ ಮತ್ತು ಅನುಕೂಲಕ್ಕಾಗಿ ಎಸ್‌ಯುವಿಯಲ್ಲಿ 360 ಡಿಗ್ರಿ ಕ್ಯಾಮೆರಾ ಅಳವಡಿಸಲಾಗಿದೆ.
2022ಕ್ಕೆ ಪರಿಚಯಗೊಂಡ ಟೊಯೊಟಾ ಹೈರೈಡರ್ ಈವರೆಗೂ ಒಂದು ಲಕ್ಷ ಗ್ರಾಹಕರ ಮನೆ ತಲುಪಿದೆ. ಮೂರು ವರ್ಷ ಅಥವಾ ಒಂದು ಲಕ್ಷ ಕಿಲೋ ಮೀಟರ್ ವಾರೆಂಟಿ ಹಾಗೂ 8 ವರ್ಷ ಅಥವಾ 1.6 ಲಕ್ಷ ಕಿಲೋ ಮೀಟರ್ ಹೈಬ್ರಿಡ್ ಬ್ಯಾಟರಿ ವಾರೆಂಟಿಯೊಂದಿಗೆ ಈ ಕಾರು ಲಭ್ಯವಿದೆ. ಸೀಮಿತ ಅವಧಿಗೆ ಲಭ್ಯವಿರುವ ಪ್ರೆಸ್ಟೀಜ್ ಪ್ಯಾಕೇಜ್ ಹೊಸ ಸೇರ್ಪಡೆ.