ಮಾಲಿನ್ಯ ನಿಯಂತ್ರಿಸಲು ಸರ್ಕಾರದ ಕಠಿಣ ಕ್ರಮದ ಪರಿಣಾಮ ಬಹುತೇಕ ಕಾರು ತಯಾರಿಕಾ ಕಂಪನಿಗಳು ಪೆಟ್ರೋಲ್ ಕಾರುಗಳತ್ತ ಮುಖ ಮಾಡಿದ್ದಾರೆ. ಆದರೆ ಈಗಲೂ ಭಾರತದಲ್ಲಿ ಡೀಸೆಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಎಸ್ಯುವಿ ವಿಭಾಗದಲ್ಲಿ ಡೀಸೆಲ್ ಎಂಜಿನ್ಗಳನ್ನು ಬಯಸುವವರೇ ಹೆಚ್ಚು. ಇಂಥವರಿಗಾಗಿ ₹30 ಲಕ್ಷದೊಳಗಿನ ಡೀಸೆಲ್ ಕಾರುಗಳನ್ನು ಪಟ್ಟಿ ಮಾಡಲಾಗಿದೆ. ಇದು ಮುಂದೆ ಹಲವು ಭಾಗಗಳಲ್ಲಿ ಪ್ರಕಟವಾಗಲಿದೆ.

ಮಹೀಂದ್ರಾ ಬೊಲೆರೊ
ಬೆಲೆ: ₹ 9.79 ಲಕ್ಷ – ₹ 10.90 ಲಕ್ಷ
ಭಾರತದಲ್ಲಿ ಸದ್ಯ ಲಭ್ಯವಿರುವ ಡೀಸೆಲ್ ಎಸ್ಯುವಿಗಳಲ್ಲಿ ಅತ್ಯಂತ ಅಗ್ಗದ ಬೆಲೆಗೆ ಲಭ್ಯವಿರುವುದು ಮಹೀಂದ್ರಾ ಬೊಲೆರೊ. ಬಿ4, ಬಿ6 ಮತ್ತು ಬಿ6(ಒ) ಮಾದರಿಗಳಲ್ಲಿ ಲಭ್ಯ. 76 ಅಶ್ವಶಕ್ತಿ, 210 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುವ 1.5 ಲೀಟರ್ ಡೀಸೆಲ್ ಎಂಜಿನ್ ಇದರಲ್ಲಿದ್ದು, 5 ಗೇರ್ಗಳ ಕಾರು ಇದಾಗಿದೆ.
ಕೆಳ ಹಂತದ ಟಾರ್ಕ್ ಇದ್ದು ಪದೇ ಪದೇ ಗೇರ್ ಬದಲಾವಣೆ ಅವಶ್ಯಕತೆ ತೀರಾ ಕಡಿಮೆ. ಆರಾಮದಾಯಕ ಚಾಲನೆ ಇದು ಸೂಕ್ತ.

ಮಹೀಂದ್ರೆ ಬೊಲೆರೊ ನಿಯೊ ಮತ್ತು ಬೊಲೆರೊ ನಿಯೊ+
ಬೆಲೆ: ₹ 9.49 ಲಕ್ಷದಿಂದ ₹ 12.15 ಲಕ್ಷ/ ₹ 11.39 ಲಕ್ಷದಿಂದ ₹12.49 ಲಕ್ಷ
ಬೊಲೆರೊ ನಿಯೊ ಏಳು ಆಸನಗಳ ಕಾರು ಮತ್ತು ಬೊಲೆರೊ ನಿಯೊ_ 9 ಆಸನವುಳ್ಳದ್ದು. ಆಧುನಿಕ ವಿನ್ಯಾಸದಲ್ಲಿ ಈ ಎರಡೂ ಕಾರುಗಳು ಲಭ್ಯ. ಬೊಲೆರೊ ನಿಯೊದಲ್ಲಿ ಎನ್4, ಎನ್8, ಎನ್10 ಮತ್ತು ಎನ್10 (ಒ) ಮಾದರಿಗಳಿವೆ. ಬೊಲೆರೊ ನಿಯೊ_ ಕಾರಿನಲ್ಲಿ ಪಿ4 ಮತ್ತು ಪಿ10 ಸಂಪೂರ್ಣ ಡೀಸೆಲ್ ಮಾದರಿಗಳಾಗಿವೆ. ಈ ಎರಡೂ ಕಾರುಗಳ ಹಿಂಬದಿಯ ಚಕ್ರಗಳ ಬಲದಿಂದ ಚಲಿಸಲಿವೆ. ಬೊಲೆರೊ ನಿಯೊ 100 ಅಶ್ವಶಕ್ತಿ ಮತ್ತು 260 ನ್ಯೂಟನ್ ಮೀಟರ್ ಟಾರ್ಕ್ನ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.
ನಿಯೊ+ ಮಾದರಿಯು 120 ಅಶ್ವಶಕ್ತಿ ಮತ್ತು 280 ನ್ಯೂಟನ್ ಮೀಟರ್ ಟಾರ್ಕ್ ಉತ್ಪದಿಸುವ 2.2 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿದೆ. ನಿಯೊದಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ಇದ್ದರೆ ನಿಯೊ+ ಕಾರಿನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಇದೆ. ಈ ಎರಡೂ ಮಾದರಿಯ ಕಾರುಗಳಲ್ಲಿ ಆಟೊಮ್ಯಾಟಿಕ್ ಗೇರ್ಬಾಕ್ಸ್ನ ಆಯ್ಕೆ ಇಲ್ಲ.
ಕಡಿಮೆ ಬೆಲೆಯಲ್ಲಿ ಉತ್ತಮ ಡೀಸೆಲ್ ಕಾರುಗಳು ಇವು. ಎಲ್ಲಾ ಆಸನಗಳು ಭರ್ತಿಯಾದ ಸಂದರ್ಭದಲ್ಲಿ 100 ಕಿ.ಮೀ. ವೇಗಕ್ಕಿಂತ ಹೆಚ್ಚು ಚಲಿಸುವಾಗ ಇನ್ನಷ್ಟು ಶಕ್ತಿ ಅಗತ್ಯ ಎಂದೆನಿಸಬಹುದಷ್ಟೇ.

ಮಹೀಂದ್ರೆ ಎಕ್ಸ್ಯುವಿ 3ಎಕ್ಸ್ಒ
ಬೆಲೆ: ₹ 9.99 ಲಕ್ಷದಿಂದ ₹ 14.99 ಲಕ್ಷ
ಮಹೀಂದ್ರ ಕಂಪನಿಯು ತನ್ನ ಎಕ್ಸ್ಯುವಿ300 ಕಾರಿಗೆ ಹೊಸ ರೂಪ ನೀಡಿದೆ. ಈ ಡೀಸೆಲ್ ಎಂಜಿನ್ ಹೊಂದಿರುವ ಕಾರಿನಲ್ಲಿ MX2, MX2 Pro, MX3, MX3 Pro, AX5, AX7 ಮತ್ತು AX7 L ಎಂಬ ಮಾದರಿಗಳಿವೆ. 117 ಅಶ್ವ ಶಕ್ತಿ ಹಾಗೂ 300 ನ್ಯೂಟನ್ ಮೀಟರ್ ಉತ್ಪಾದಿಸುವ 1.5 ಲೀಟರ್ ಸಾಮರ್ಥ್ಯದ ಎಂಜಿನ್ ಇದು ಹೊಂದಿದೆ. ಮಹೀಂದ್ರಾದ ಈ ಹಿಂದೆ ಹೇಳಲಾಗಿರುವ ಎಲ್ಲಾ ಮಾದರಿಗಳಲ್ಲೂ ಮ್ಯಾನುಯಲ್ ಗೇರ್ ಬಾಕ್ಸ್ ಮಾತ್ರ ಲಭ್ಯ. ಆದರೆ XUV300 ಕಾರಿನಲ್ಲಿ 6 ಸ್ಪೀಡ್ ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಗೇರ್ ಬಾಕ್ಸ್ ಲಭ್ಯ.
ಕಡಿಮೆ ವೇಗದಲ್ಲಿ ಟರ್ಬೊ ತುಸು ಬೇಕೆನಿಸುತ್ತದೆ ಎನ್ನುವುದನ್ನು ಬಿಟ್ಟರೆ ಚಾಲನೆ ಹಿತಕರವಾಗಿದೆ.

ಟಾಟಾ ನೆಕ್ಸಾನ್
ಬೆಲೆ; ₹ 10ಲಕ್ಷ – ₹15.60 ಲಕ್ಷ
ಮಹೀಂದ್ರಾ 3ಎಕ್ಸ್ಒಗೆ ಹೋಲಿಸಿದರೆ ಟಾಟಾ ನೆಕ್ಸಾನ್ ತುಸು ಬೆಲೆ ಹೆಚ್ಚು. ಅದರಲ್ಲೂ ಅಗ್ರ ವೇರಿಯಂಟ್ ನೆಕ್ಸಾನ್ ತುಸು ದುಬಾರಿ. ನೆಕ್ಸಾನ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಸ್ಮಾರ್ಟ್+, ಸ್ಮಾರ್ಟ್+ಎಸ್, ಪ್ಯೂರ್+, ಪ್ಯೂರ್+ಎಸ್, ಕ್ರಿಯೇಟಿವ್ ಮಾದರಿಯಲ್ಲಿ ಮೂರು ಉಪಮಾದರಿಗಳಿವೆ. 115 ಅಶ್ವಶಕ್ತಿ, 260 ನ್ಯೂಟನ್ ಮೀಟರ್ ಟಾರ್ಕ್ ಹೊಂದಿರುವ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. 6 ಸ್ಪೀಡ್ಗಳ ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಲಭ್ಯ.
ಮಧ್ಯಮ ವೇಗದಲ್ಲಿ ಉತ್ತಮ ಶಕ್ತಿ, ಮೃದುವಾದ ಚಾಲನೆ, ಎತ್ತರದ ಪ್ರದೇಶದಲ್ಲಿ ಗೇರ್ ಬದಲಿಸಬೇಕಾಗಬಹುದು.

ಕಿಯಾ ಸಾನೆಟ್
ಬೆಲೆ: ₹ 10 ಲಕ್ಷದಿಂದ ₹ 15.74 ಲಕ್ಷ
ಕಾಂಪ್ಯಾಕ್ಟ್ ಎಸ್ಯುವಿ ಮಾದರಿಯಲ್ಲಿ ಸಾಕಷ್ಟು ಪ್ರಚಲಿತದಲ್ಲಿರುವುದು ಕಿಯಾ ಕಂಪನಿಯ ಸಾನೆಟ್ ಡೀಸೆಲ್ ಎಂಜಿನ್ ಕಾರು. ಎಚ್ಟಿಇ, ಎಚ್ಟಿಕೆ, ಜಿಟಿಎಕ್ಸ್ ಎಂಬ ಐದು ಮಾದರಿ ಹಾಗೂ ಉಪಮಾದರಿಗಳಿವೆ. 116 ಅಶ್ವಶಕ್ತಿ, 250 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುವ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಇದು ಹೊಂದಿದೆ. 6 ಸ್ಪೀಡ್ ಮ್ಯಾನುಯಲ್ ಅಥವಾ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಇದು ಹೊಂದಿದೆ. ಸದ್ಯ ಐಎಂಟಿ ಹಿಂಪಡೆಯಲಾಗಿದೆ.
ಇಂಧನ ಕ್ಷಮತೆ ಮತ್ತು ಕಾರ್ಯ ಕ್ಷಮತೆ ಎರಡೂ ಹದವಾಗಿ ಬೆರೆಸಲಾದ ಎಂಜಿನಿಯರಿಂಗ್ ಇದರದ್ದು. ಆರಾಮದಾಯಕ ಚಾಲನೆಯಲ್ಲಿ ಟಾರ್ಕ್ ಕನ್ವರ್ಟರ್ ಉತ್ತಮವಾಗಿದೆ.
ಮುಂದಿನ ಭಾಗದಲ್ಲಿ ಇನ್ನಷ್ಟು ಕಾರುಗಳೊಂದಿಗೆ Crossroadz.in ನಿಮ್ಮ ಮುಂದೆ ಬರಲಿದೆ.