ಭಾರತದಲ್ಲಿ ಸದ್ಯ ಮಧ್ಯಮ ಗಾತ್ರದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV) ಮಾದರಿ ಕಾರುಗಳ ಪರ್ವ. ಅದಕ್ಕೆ ಮಾರುತಿ ಸುಜುಕಿ ಕಂಪನಿಯ ಮತ್ತೊಂದು ಸೇರ್ಪಡೆ ವಿಕ್ಟೊರಿಸ್.
ತನ್ನದೇ ಗ್ರಾಂಡ್ ವಿಟಾರಾ ಕಾರಿನ ವಿಸ್ತೃತ ಮಾದರಿಯಂತೆ ಕಾಣುವ ವಿಕ್ಟೊರಿಸ್ ಅರೆನಾ ವೇದಿಕೆಯಲ್ಲಿ ಕಂಪನಿಯು ಮಾರಾಟ ಮಾಡಲಿದೆ. ವೀಲ್‌ಬೇಸ್ ಉದ್ದವಾಗಿದೆ.
ಯುವ ಜನತೆಯನ್ನೇ ಗುರಿಯಾಗಿಸಿಕೊಂಡು ಈ ಕಾರನ್ನು ಅಭಿವೃದ್ಧಿಪಡಿಸಿರುವುದಾಗಿ ಕಂಪನಿಯ ಭಾರತ ವಿಭಾಗದ ವ್ಯವಸ್ಥಾಪಕ ಮತ್ತು ಸಿಇಒ ಹಿಸಾಚಿ ಟೆಕುಚಿ ಹೇಳಿದ್ದಾರೆ.
ಹೈಬ್ರಿಡ್ ಮತ್ತು ಸಿಎನ್‌ಜಿ ಸೇರಿದಂತೆ ಹಲವು ಬಗೆಯ ಎಂಜಿನ್ ಆಯ್ಕೆಗಳು ವಿಕ್ಟೊರಿಸ್‌ನಲ್ಲಿದೆ. 2ನೇ ಹಂತದ ಎಡಿಎಎಸ್ ಅಳವಡಿಸಲಾಗಿದೆ. ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಎಚ್ಚರಿಕೆ, ಲೇನ್ ಪಾಲನೆ ಹಾಗೂ ಹಲವು ಸೌಲಭ್ಯಗಳು ಇವೆ
ಹ್ಯುಂಡೇ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಹೊಂಡಾ ಎಲಿವೇಟ್‌ನೊಂದಿಗೆ ಮಾರುತಿ ಸುಜುಕಿ ವಿಕ್ಟೊರಿಸ್ ಸ್ಪರ್ಧೆ ಹೊಂದಲಿದೆ. ಈ ಹೊಸ ಕಾರಿನ ಬೆಲೆಯನ್ನು ಮಾರುತಿ ಸುಜುಕಿ ಸದ್ಯಕ್ಕೆ ಘೋಷಿಸಿಲ್ಲ. ವಿಕ್ಟೊರಿಸ್ ಎಸ್‌ಯುವಿ ಮಾದರಿಯು ಜಗತ್ತಿನ ಸುಮಾರು ನೂರು ಮಾರುಕಟ್ಟೆಗೆ ರಫ್ತಾಗಲಿದೆ. ಈ ಕಾರಿನ ಅಭಿವೃದ್ಧಿಗೆ ಕಂಪನಿಯು ₹1,240 ಕೋಟಿ ವೆಚ್ಚ ಮಾಡಿರುವುದಾಗಿ ಕಂಪನಿ ಹೇಳಿದೆ.

Victoris ಹೇಗಿದೆ ಎಂಬುದನ್ನು ಒಮ್ಮೆ ನೋಡಿ ಬರೋಣ
- ಮಾರುತಿ ಸುಜುಕಿ ವಿಕ್ಟೊರಿಸ್ 6 ವೇರಿಯಂಟ್‌ಗಳಲ್ಲಿ ಹಾಗೂ 10 ಬಣ್ಣಗಳಲ್ಲಿ ಲಭ್ಯ
- ಪ್ರಿ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದ್ದು ₹11 ಸಾವಿರ ಪಾವತಿಸಬೇಕಷ್ಟೇ
- 1.5 ಲೀಟರ್ ಪೆಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ ಮತ್ತು ಎಸ್–ಸಿಎನ್‌ಜಿ (ಬಾಡಿ ಕೆಳಗೆ ಟ್ಯಾಂಕ್ ಅಳವಡಿಸಲಾಗಿದೆ) ಆಯ್ಕೆ ಇದೆ. K15C ಅಲ್ಪ ಪ್ರಮಾಣದ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 102 ಬಿಎಚ್‌ಪಿ ಶಕ್ತಿ ಮತ್ತು 139 ನ್ಯೂಟನ್ ಮೀಟರ್ ಟಾರ್ಕ್ ಇದರದ್ದು.
- ಇನ್‌ಫಿನಿಟಿ ಹರ್ಮನ್ ಮತ್ತು ಡಾಲ್ಬಿ ಆಟಮ್ಸ್ ಸರೌಂಡ್ ಸಿಸ್ಟಂ, ಅಲೆಕ್ಸಾ ವಾಯ್ಸ್ ಕಂಟ್ರೋಲ್, ಎಡಿಎಎಸ್ನ 2ನೇ ಹಂತ ಮತ್ತು 10.25 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇದರಲ್ಲಿದೆ.
- ಗ್ರಾಂಡ್ ವಿಟಾರಾ ಮತ್ತು ಬ್ರೀಜಾ ಹೋಲುವ ವಿಕ್ಟರಿಸ್ ಐದು ಆಸನಗಳ ಕಾರು
- ಹಿಂದೆ ಹಾಗೂ ಮುಂದಿನ ವಿನ್ಯಾಸ ಆಕರ್ಷಕವಾಗಿದೆ. ಹೊಸ ಮಾದರಿಯ ಹೆಡ್‌ಲ್ಯಾಂಪ್, ವಿಭಿನ್ನ ಮಾದರಿಯ ಡಿಆರ್‌ಎಲ್‌ಗಳು, ಎಲ್‌ಇಡಿ ಟೇಲ್ ಲ್ಯಾಂಪ್, ಹೊಸ ಬಗೆಯ ಅಲಾಯ್ ವೀಲ್
- 4360 ಮಿ.ಮೀ. ಉದ್ದವಿರುವ ಈ ಕಾರಿನ ವೀಲ್‌ಬೇಸ್ 2600 ಮಿ.ಮೀ. ಇದೆ. ಹೀಗಾಗಿ ಒಳಾಂಗಣದಲ್ಲಿ ಸಾಕಷ್ಟು ಸ್ಥಳಾವಕಾಶ ಲಭ್ಯ.

- ಕ್ಯಾಬಿನ್ ಒಳಗೆ 10.25 ಇಂಚಿನ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇದೆ. 10.65 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಂ ಇದೆ. ಕಪ್ಪು ಹಾಗೂ ದಂತ ಬಣ್ಣದ ಒಳಾಂಗಣ, ಪೆಡಲ್ ಶಿಫ್ಟರ್ ಇರುವ ಸ್ಟಿಯರಿಂಗ್
- ಅಲೆಕ್ಸಾ ವಾಯ್ಸ್ ಕಂಟ್ರೋಲ್ ಮತ್ತು 35ಕ್ಕೂ ಹೆಚ್ಚು ಆ್ಯಪ್‌ಗಳು ಇದರಲ್ಲಿದೆ.
- 64 ಬಣ್ಣಗಳ ಆಯ್ಕೆ ಇರುವ ಆ್ಯಂಬಿಯಂಟ್ ಲೈಟಿಂಗ್
- ಐದು ಸ್ಪೀಡ್‌ಗಳ ಗೇರ್ ಮತ್ತು ಆರು ಸ್ಪೀಡ್‌ನ ಆಟೊಮೆಟಿಕ್ ಗೇರ್ ಆಯ್ಕೆ
- Zxi plus ಮತ್ತು Zxi plus (O) ವೇರಿಯಂಟ್‌ನಲ್ಲಿ ಅಲ್ ವೀಲ್ ಡ್ರೈವ್ ಆಯ್ಕೆ ಲಭ್ಯ.
- 45 ಲೀಟರ್‌ನ ಇಂಧನ ಟ್ಯಾಂಕ್ ಅನ್ನು ವಿಕ್ಟೊರಿಸ್ ಹೊಂದಿದೆ. ಪ್ರತಿ ಲೀಟರ್‌ಗೆ 19ರಿಂದ 21 ಕಿ.ಮೀ.ವರೆಗೂ ಮೈಲೇಜ್ ಪಡೆಯಬಹುದಾಗಿದ್ದು, ದೀರ್ಘ ಪ್ರಯಾಣಕ್ಕೆ ಹೇಳಿಮಾಡಿಸಿದಂತಿದೆ

- 360 ಡಿಗ್ರಿ ಕ್ಯಾಮೆರಾ ಇದರಲ್ಲಿ ನೀಡಲಾಗಿದೆ. ಪಿಎಂ2.5 ಗಾತ್ರದ ದೂಳನ್ನು ನಿಯಂತ್ರಿಸಿ ಶುದ್ಧ ಗಾಳಿಯನ್ನು ಒಳಗೆ ನೀಡುವ ಹವಾನಿಯಂತ್ರಿತ ಸಾಧನ
- ಮಾರುತಿ ಸುಜುಕಿ ವಿಕ್ಟೊರಿಸ್‌ನ ಬೆಲೆ ಇನ್ನೂ ಬಹಿರಂಗವಾಗದಿದ್ದರೂ ₹12 ಲಕ್ಷದ ಮೇಲ್ಪಟ್ಟು ಎಂದು ಅಂದಾಜಿಸಲಾಗಿದೆ.
