ಹೊಸ ವರ್ಷ 2026ರಲ್ಲಿ ವಾಹನ ಕ್ಷೇತ್ರದಲ್ಲಿ ಬಹಳಷ್ಟು ಹೊಸ ಬೆಳವಣಿಗೆಗಳು ಗರಿಗೆದರಿವೆ. ವರ್ಷದ ಆರಂಭದ ಒಂಬತ್ತು ವಾರದಲ್ಲಿ ಒಂಬತ್ತು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ರಸ್ತೆಗಿಳಿಯಲಿವೆ.
ಟಾಟಾ, ಮಾರುತಿ, ಮಹೀಂದ್ರಾ, ಕಿಯಾ, ಸ್ಕೋಡಾ, ರಿನೊ ಮತ್ತು ನಿಸ್ಸಾನ್ ಹೊಸ ಮಾದರಿಯ ಎಸ್‌ಯುವಿಗಳನ್ನು ಪರಿಚಯಿಸಲು ಸಜ್ಜಾಗಿವೆ.
ಜನವರಿಯಿಂದ ಆರಂಭವಾಗಿ ಫೆಬ್ರುವರಿಯವರೆಗೂ ಹಂತ ಹಂತವಾಗಿ ಕಂಪನಿಗಳ ಹೊಸ ಕಾರುಗಳು ಬಿಡುಗಡೆಯಾಗುತ್ತಿವೆ.

ಕಿಯಾ ಸೆಲ್ಟೋಸ್ 2026 (ನ್ಯೂ ಜೆನರೇಷನ್)
ತನ್ನ ಹೊಸ ಮಾದರಿಯ ಹಾಗೂ 2ನೇ ತಲೆಮಾರಿನ ಸೆಲ್ಟೋಸ್ ಅನ್ನು ಬಿಡುಗಡೆ ಮಾಡುತ್ತಿದೆ. ಜನವರಿ 2ರಿಂದ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಈ ಕಾರು ಹ್ಯುಂಡೇ–ಕಿಯಾ 3ನೇ ತಲೆಮಾರಿನ ಕೆ3 ಪ್ಲಾಟ್‌ಫಾರ್ಮ್ ಮೇಲೆ ತಯಾರಾಗಿದೆ. ಹಿಂದಿನ ಸೆಲ್ಟೋಸ್‌ಗಿಂತ ತುಸು ದೊಡ್ಡದು. ಹೆಚ್ಚು ಲೆಗ್ ರೂಂ, ದೊಡ್ಡ ಕ್ಯಾಬಿನ್ ಹೊಂದಿದೆ.
ಒಳಾಂಗಣದಲ್ಲಿ ಐಷಾರಾಮಿ ಸೌಕರ್ಯಗಳನ್ನು ನೀಡಲಾಗಿದೆ. ಎರಡು ಪರದೆಯ ಇನ್ಫೊಟೈನ್ಮೆಂಟ್ ಸಿಸ್ಟಂ ಟ್ರಿನಿಟಿ ಪ್ಯಾನಾರೊಮಿಕ್ ಡಿಸ್‌ಪ್ಲೇ ನೀಡಲಾಗಿದೆ.
1.5 ಲೀ. ನ್ಯಾಚುರಲ್ ಆ್ಯಸ್ಪಿರೇಷನ್ ಪೆಟ್ರೋಲ್, 1.5 ಲೀ ಟರ್ಬೊಚಾರ್ಜರ್ಡ್ ಪೆಟ್ರೋಲ್ ಮತ್ತು 1.5ಲೀ ಡೀಸೆಲ್. ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮಾದರಿಯನ್ನು 2027ರಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಕಿಯಾ ಹೊಂದಿದೆ. ಹೊಸ ಮಾದರಿಯ ಸೆಲ್ಟೋಸ್‌ನ ಬೆಲೆ ₹22 ಲಕ್ಷ ಎಂದು ಅಂದಾಜಿಸಲಾಗಿದೆ.

ಟಾಟಾ ಹ್ಯಾರಿಯರ್
ಟಾಟಾ ಹ್ಯಾರಿಯರ್ ಮತ್ತು ಸಫಾರಿ ಹೊಸ ಮಾದರಿಯ 1.5 ಲೀಟರ್ ಡೈರೆಕ್ಟ್ ಇಂಜಂಕ್ಷನ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ (ಹೈಪರಿಯಾನ್) ಮಾದರಿಯಲ್ಲಿ ಲಭ್ಯ. ಡೀಸಲ್ ಮಾದರಿ ಮಾತ್ರವಲ್ಲದೆ ಪೆಟ್ರೋಲ್ ಮಾದರಿಯಲ್ಲೂ ಈ ಎರಡು ಪ್ರಮುಖ ಎಸ್‌ಯುವಿಗಳನ್ನು ಟಾಟಾ ಪರಿಚಯಿಸುತ್ತಿದೆ. ಜ. 5ರಿಂದ ಮಾರುಕಟ್ಟೆ ಪ್ರವೇಶಿಸಲಿರುವ ಈ ಎರಡು ಎಸ್‌ಯುವಿಗಳು ₹25.5 ಲಕ್ಷ ಆಸುಪಾಸಿನಲ್ಲಿ ಲಭ್ಯ.
ಮಹೀಂದ್ರ ಎಕ್ಸ್‌ಯುವಿ 7XO
ಸಾಲು ಸಾಲು ಕಾರುಗಳನ್ನು ಪರಿಚಯಿಸುತ್ತಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಜ. 5ರ ಹೊತ್ತಿಗೆ ಎಕ್ಸ್‌ಯುವಿ 7ಎಕ್ಸ್‌ಒ ಎಸ್‌ಯುವಿಯನ್ನು ರಸ್ತೆಗಿಳಿಸುತ್ತಿದೆ. ಹೊಸ ಮಾದರಿಯ ಗ್ರಿಲ್, ವಿಭಿನ್ನ ವಿನ್ಯಾಸದ ಎಲ್‌ಇಡಿ ದೀಪ, ಹೊಸ ಗಾಲಿಗಳು ಮತ್ತು ಹೊಸ ಸ್ವರೂಪದ ಬಂಪರ್ ಇದರ ವಿಶೇಷತೆ.
ಎಕ್ಸ್‌ಇವಿ 9ಇ ಮತ್ತು 9ಎಸ್ ಮಾದರಿಯ ಇವಿ ಎಸ್ಯವಿಗಳ ಸಾಲಿಗೆ 7ಎಕ್ಸ್‌ಒ ಸೇರಲಿದೆ. ಒಳಾಂಗಣವನ್ನು ಇನ್ನಷ್ಟು ಸುಂದರಗೊಳಿಸಲಾಗಿದೆ. 12.3 ಇಂಚುಗಳ ಮೂರು ಪರದೆಯನ್ನು ಇದರಲ್ಲಿ ನೀಡಲಾಗಿದೆ. ಹರ್ಮನ್ ಕಾರ್ಡೊನ್ ಪ್ರೀಮಿಯಂ ಆಡಿಯೊ ಇದರಲ್ಲಿ ಅಳವಡಿಸಲಾಗಿದೆ. ಡಾಲ್ಬಿ ಆಟಮ್ಸ್, ಸೋನಿ 3ಡಿ ಸರೌಂಡ್ ಸೌಂಡ್ ಇದರಲ್ಲಿ ನೀಡಲಾಗಿದೆ. ಈ ಕಾರಿನ ಬೆಲೆ ₹15 ಲಕ್ಷ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.

ಸ್ಕೋಡಾ ಕುಷಾಕ್
ಸ್ಕೋಡಾ ತನ್ನ ಅತ್ಯಂತ ಜನಪ್ರಿಯ ಎಸ್‌ಯುವಿ ಕುಷಾಕ್ ಅನ್ನು ಹೊಸ ರೂಪದೊಂದಿಗೆ ಮರಳಿ ಪರಿಚಯಿಸುತ್ತಿದೆ. ಜ. 19ರಂದು ಈ ಕಾರು ಬಿಡುಗಡೆಯಾಗುತ್ತಿದೆ. ಫೆಬ್ರುವರಿ ವೇಳೆಗೆ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಹೊರಾಂಗಣ, ಹೊಸ ಮಾದರಿಯ ವೀಲ್‌ಗಳು, ದೀಪಗಳ ಮಾದರಿಯನ್ನೂ ಬದಲಿಸಿದೆ.
ಲೆವೆಲ್ 2 ಎಡ್ಯಾಸ್, ಪ್ಯಾನಾರೊಮಿಕ್ ಸನ್‌ರೂಫ್, ಹಿಂಬದಿ ಆಸನಗಳಿಗೆ ಮಸಾಜ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಮೆಕ್ಯಾನಿಕಲ್ ವಿಭಾಗದಲ್ಲಿ ಯಾವುದೇ ಬದಲಾವಣೆ ಇಲ್ಲ. 1.0 ಲೀ ಟರ್ಬೊ ಚಾರ್ಜರ್ಡ್ ಪೆಟ್ರೋಲ್ ಮತ್ತು 1.5 ಲೀ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. ಡಿಎಸ್‌ಜಿ ಆಟೊಮ್ಯಾಟಿಕ್ ಮತ್ತು ಮ್ಯಾನುಯಲ್ ಗೇರ್‌ಬಾಕ್ಸ್ ಹೊಂದಿದೆ.
ಮಾರುತಿ ಇ–ವಿಟಾರಾ (EV)
ಮಾರುತಿ ಸುಜುಕಿ ಕಂಪನಿಯ ವಿಟಾರಾ ಈಗ ಇ–ವಿಟಾರಾ ಆಗಿ ಪರಿಚಯಗೊಳ್ಳುತ್ತಿದೆ. ಜ. 15ರಂದು ಈ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. 48.8 ಕಿಲೋ ವಾಟ್ ಬ್ಯಾಟರಿಯು ಸಂಪೂರ್ಣ ಚಾರ್ಜ್ ಆದಲ್ಲಿ 344 ಕಿ.ಮೀ. ದೂರವನ್ನು ಕ್ರಮಿಸಲಿದೆ. ಇದಕ್ಕಾಗಿ ಗರಿಷ್ಠ 142 ಅಶ್ವ ಶಕ್ತಿಯನ್ನು ಹಾಗೂ 189 ನ್ಯೂಟನ್ ಮೀಟರ್ ಅನ್ನು ಇದು ಉತ್ಪಾದಿಸಬಲ್ಲದು. 61.1 ಕಿಲೋ ವಾಟ್ ಸಾಮರ್ಥ್ಯದ ಇ–ವಿಟಾರಾ ಗರಿಷ್ಠ 500 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದೆ. 170 ಅಶ್ವಶಕ್ತಿಯನ್ನು ಇದು ಉತ್ಪಾದಿಸಲಿದೆ. ಈ ಎರಡೂ ಮಾದರಿಗಳಲ್ಲಿ ಮೋಟಾರ್ ಅನ್ನು ಮುಂಭಾಗದ ಚಕ್ರಗಳಿಗೆ ಶಕ್ತಿ ನೀಡುವಂತೆ ಅಳವಡಿಸಲಾಗಿದೆ. ಡಿಸಿ ಚಾರ್ಜಿಂಗ್ ಮೂಲಕ 50 ನಿಮಿಷದಲ್ಲಿ ಶೇ 80ರಷ್ಟು ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ.
10.25 ಇಂಚಿನ ಟಚ್ ಸ್ಕ್ರೀನ್ ಇನ್ಫೊಸೈನ್ಮೆಂಟ್, ಇನ್ಫಿನಿಟಿ ಕಂಪನಿಯ 10 ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಮುಂಭಾಗದ ಆಸನಗಳು ವೆಂಟಿಲೇಟೆಡ್ ಆಗಿರುವುದರ ಜತೆಗೆ 10 ಮಾದರಿಯಲ್ಲಿ ಸರಿಹೊಂದಿಸಿಕೊಳ್ಳುವಂತೆ ಎಲೆಕ್ಟ್ರಾನಿಕ್ ವ್ಯವಸ್ಥೆ ನೀಡಲಾಗಿದೆ. 360 ಡಿಗ್ರಿ ಕ್ಯಾಮೆರಾ, ಎಡ್ಯಾಸ್ 2ನೇ ಹಂತ ಇದರಲ್ಲಿದೆ. ಈ ಕಾರು ₹17 ಲಕ್ಷದಿಂದ ₹22.5 ಲಕ್ಷ ಆಸುಪಾಸಿನಲ್ಲಿ ಪರಿಚಯಗೊಳ್ಳುವ ಸಾಧ್ಯತೆ ಇದೆ.
ರಿನೊ ಡಸ್ಟರ್
ರಿನೊ ಡಸ್ಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡುತ್ತಿದೆ. 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಇದೆ. ಆರು ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಮತ್ತು ಸಿವಿಟಿ ಯೂನಿಟ್ ಕೂಡ ಇದೆ. ಹೈಬ್ರಿಡ್ ಪವರ್‌ಟ್ರೈನ್ ಆಯ್ಕೆಯೂ ಇದೆ. 1.6 ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಮತ್ತು 2 ಎಲೆಕ್ಟ್ರಿಕ್ ಮೋಟಾರ್ಸ್ ಹೊಂದಿರುವ ಎಂಜಿನ್ ಆಯ್ಕೆಯನ್ನೂ ನೀಡಲಾಗಿದೆ. ₹10 ಲಕ್ಷದಿಂದ ಡಸ್ಟರ್ ಲಭ್ಯ ಎಂದೆನ್ನಲಾಗಿದೆ. ಜ. 26ರಂದು ಇದು ಬಿಡುಗಡೆಯಾಗಲಿದೆ.

ಫೋಕ್ಸ್ ವ್ಯಾಗನ್ ಟೈಗುನ್ ಫೇಸ್‌ಲಿಫ್ಟ್
ಜರ್ಮನಿಯ ಫೋಕ್ಸ್‌ವ್ಯಾಗನ್ ಕಂಪನಿಯು ಟೈಗುನ್‌ಗೆ ಹೊಸ ರೂಪವನ್ನು ನೀಡಿ 2026ರಲ್ಲಿ ಪರಿಚಯಿಸುತ್ತಿದೆ. ₹11.69 ಲಕ್ಷ ಬೆಲೆಗೆ ಬೇಸ್ ವೇರಿಯಂಟ್ ಮತ್ತು ₹19.73 ಲಕ್ಷಕ್ಕೆ ಜಿಟಿ ಪ್ಲಸ್ 1.5 ಲೀಟರ್ ಟಿಎಸ್‌ಐ ಡಿಎಸ್‌ಜಿ ವೇರಿಯಂಟ್ ಲಭ್ಯ. ₹19.99 ಲಕ್ಷಕ್ಕೆ ಜಿಟಿ ಎಡ್ಜ್ ಸ್ಪೋರ್ಟ್ 1.5 ಲೀಟರ್ ಟಿಎಸ್‌ಐ ಡಿಎಸ್‌ಜಿ ವೇರಿಯಂಟ್ ಲಭ್ಯ.
ಟಾಟಾ ಸಿಯಾರಾ ಇವಿ
ಇತ್ತೀಚೆಗೆ ಬಿಡುಗಡೆಗೊಂಡ ಟಾಟಾ ಸಿಯಾರಾ, ಜ. 26ರಂದು ಬ್ಯಾಟರಿ ಚಾಲಿತ ಕಾರನ್ನು ಪರಿಚಯಿಸುತ್ತಿದೆ. ₹15 ಲಕ್ಷ ಆಸುಪಾಸಿನಲ್ಲಿ ಲಭ್ಯವಿರುವ ಈ ಕಾರು ಹಲವು ಹೊಸತುಗಳನ್ನು ಹೊಂದಿದೆ. ಜ. 15ರಂದು ಇವಿ ಮಾದರಿಯ ಕಾರು ರಸ್ತೆಗಿಳಿಯಲಿದೆ.





