ನಿಸ್ಸಾನ್ ತನ್ನ 6ನೇ ತಲೆಮಾರಿನ ಮೈಕ್ರಾವನ್ನು ಪರಿಚಯಿಸುತ್ತಿದೆ. ಮೈಕ್ರಾ ಎಂಬ ನಿಸ್ಸಾನ್ ಕಾರು ಪರಿಚಯಗೊಂಡಿದ್ದು 40 ವರ್ಷಗಳ ಹಿಂದೆ. ಆದರೆ ಇದೇ ಮೊದಲ ಬಾರಿಗೆ ಮೈಕ್ರಾ ಸಂಪೂರ್ಣ ಬ್ಯಾಟರಿ ಚಾಲಿತ ಕಾರಾಗಿ ಬದಲಾಗಿದೆ. ನೋಡಲು ಮಿನಿ ಕೂಪರ್ ಅನ್ನೋ ಅಥವಾ ಮಾರುತಿ ಸುಜುಕಿ ಸ್ವಿಫ್ಟ್‌ನಂತೆ ಕಂಡುಬರುವ ಮೈಕ್ರಾ ಈ ವರ್ಷದಲ್ಲಿ ಬಿಡುಗಡೆಯಾಗುತ್ತಿದೆ.
ಈ ಹಿಂದೆ ಮೈಕ್ರಾಗೆ ಸಿಕ್ಕ ಅಪಾರ ಜನಮನ್ನಣೆಯನ್ನು ಗಮದಲ್ಲಿಟ್ಟುಕೊಂಡು ಈ 6ನೇ ತಲೆಮಾರನ್ನು ಪರಿಚಯಿಸುತ್ತಿದ್ದೇವೆ. ಹೀಗಾಗಿ ಮೈಕ್ರಾದ ಹೊಸ ಅಧ್ಯಾಯವನ್ನು EV ಮೂಲಕ ಪರಿಚಯಿಸಲಾಗುತ್ತಿದೆ. ಬಾಹ್ಯನೋಟದಲ್ಲಿ ಇದು ಯುವಸಮುದಾಯಕ್ಕೆ ಹೆಚ್ಚು ಇಷ್ಟವಾಗುವಂತಿದೆ. ಬೋಲ್ಡ್, ಕ್ಯೂಟ್, ಸ್ಮಾಲ್ ರೀತಿಯಲ್ಲಿ. ಎಲ್ಲಾ ತಲೆಮಾರಿನವರಿಗೂ ಇಷ್ಟವಾಗುವಂತ ವಿನ್ಯಾಸ ಮತ್ತು ಕಾರ್ಯಕ್ಷಮತೆ ಇದರದ್ದಾಗಿದೆ ಎನ್ನುವುದು ನಿಸ್ಸಾನ್ ಉಪಾಧ್ಯಾಕ್ಷ ಜಿಯೊವಾನಿ ಅರೊಬಾ ಅವರ ಮಾತು.
ನಿಸ್ಸಾನ್ ಮೈಕ್ರಾ ಇವಿ 40 ಕಿಲೋ ವಾಟ್ ಹಾಗೂ 52 ಕಿಲೋ ವಾಟ್ ಬ್ಯಾಟರಿ ಆಯ್ಕೆಯಲ್ಲಿ ಲಭ್ಯ. 110 ಕಿಲೊ ವಾಟ್ ಅಂದರೆ 147.5 ಬಿಎಚ್‌ಪಿ ಮತ್ತು 245 ನ್ಯೂಟನ್ ಮೀಟರ್ ಟಾರ್ಕ್ ಉತ್ಪತ್ತಿ ಮಾಡಬಲ್ಲದು. ಈ ಬ್ಯಾಟರಿ ಆಯ್ಕೆಯ ಕಾರು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 408 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.
ಮೈಕ್ರಾ 90 ಕಿಲೋವಾಟ್ (120 ಅಶ್ವಶಕ್ತಿ ಮತ್ತು 225 ನ್ಯೂಟನ್ ಮೀಟರ್ ಟಾರ್ಕ್) ಉತ್ಪಾದಿಸುತ್ತದೆ. ಇದು ಪ್ರತಿ ಪೂರ್ಣ ಚಾರ್ಜ್‌ಗೆ 308 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂದು ಜಪಾನ್‌ನ ಕಾರು ತಯಾರಿಕಾ ಕಂಪನಿ ಹೇಳಿದೆ.
ಇನ್ನು ಬ್ಯಾಟರಿ ಚಾರ್ಜಿಂಗ್ ವ್ಯವಸ್ಥೆಯನ್ನು ಗಮನಿಸಿದರೆ, 100 ಕಿ.ವಾ. ಡಿಸಿ ಚಾರ್ಜರ್ ಅಥವಾ 80 ಕಿ.ವಾ. ಚಾರ್ಜಿಂಗ್ ಆಯ್ಕೆಗಳಿವೆ. ಇವು ಶೇ 15ರಿಂದ ಶೇ 80ರಷ್ಟು ಚಾರ್ಜ್‌ಗೆ 30 ನಿಮಿಷ ಸಾಕು. ಇನ್ನೂ ವೇಗವಾಗಿ ಚಾರ್ಜ್ ಆಗಬೇಕೆಂದರೆ ಹೀಟ್ ಪಂಪ್ ಆಯ್ಕೆಯನ್ನೂ ನೀಡಲಾಗಿದೆ. ಇದರೊಂದಿಗೆ ಬ್ಯಾಟರಿ ಹೀಟ್ ಮತ್ತು ಕೂಲಿಂಗ್ ಆಯ್ಕೆಯೂ ಇದೆ.
ಸಂಪೂರ್ಣ ಎಲೆಕ್ಟ್ರಿಕ್; ವಿಲಾಸಿ ಒಳಾಂಗಣ
ವಿದ್ಯುತ್ ಚಾಲಿತ ಕಾರಿನ ಸಂಪೂರ್ಣ ಲಾಭ ಪಡೆಯುವ ಉದ್ದೇಶದಿಂದ ನಿಸ್ಸಾನ್ ಕಂಪನಿಯು ಇದರಲ್ಲಿ V2L (ವೆಹಿಕಲ್ ಟು ಲೋಡ್) ತಂತ್ರಜ್ಞಾನ ಅಳವಡಿಸಿದೆ. ಇದರಿಂದ ಚಾರ್ಜ್ ಆದ ಬ್ಯಾಟರಿಯಿಂದ ಇತರ ವಿದ್ಯುತ್ ಉಪಕರಣಗಳನ್ನೂ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ನಿಸ್ಸಾನ್ ಮೈಕ್ರಾ ಇವಿಯಲ್ಲಿ 10.1 ಇಂಚಿನ ಡಿಸ್‌ಪ್ಲೇವುಳ್ಳ ಇನ್ಫೊಟೈನ್ಮೆಂಟ್ ಸಿಸ್ಟಂ ಮತ್ತು ಡಿಜಿಟಲ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್ ನೀಡಲಾಗಿದೆ. ಹೊಸ ಮಾದರಿಯ ಮೂರು ಸ್ಪೋಕ್‌ಗಳ ಸ್ಟಿಯರಿಂಗ್ ಇದೆ. ಬ್ಯುಲ್ಟ್ ಇನ್ ನ್ಯಾವಿಗೇಷನ್ ವ್ಯವಸ್ಥೆ ಇದೆ. ಸ್ಮಾರ್ಟ್‌ಫೋನ್‌ಗಳನ್ನು ಕನೆಕ್ಟ್ ಮಾಡಲು ಬ್ಲೂಟೂತ್ ವ್ಯವಸ್ಥೆ ನೀಡಲಾಗಿದೆ. ವಿಲಾಸಿ ಸ್ವರೂಪದ ಆಸನಗಳನ್ನು ನೀಡಿ ಅದರಲ್ಲೂ ಮೂರು ಆಯ್ಕೆಗಳನ್ನು ನೀಡಲಾಗಿದೆ. ನಿಸ್ಸಾನ್ ಪ್ರೊಪೈಲಟ್ ವ್ಯವಸ್ಥೆ ಇದ್ದು, ಅತ್ಯಾಧುನಿಕ ಚಾಲಕ ನೆರವಿನ ವ್ಯವಸ್ಥೆ ನೀಡಲಾಗಿದೆ.
ಭಾರತಕ್ಕೆ ಎಂದು..?
ಇಷ್ಟೆಲ್ಲಾ ಸೌಕರ್ಯ ಇರುವ ನಿಸ್ಸಾನ್ ಮೈಕ್ರಾ ಇವಿ ಭಾರತಕ್ಕೆ ಬರಲಿದೆಯೇ ಎಂಬ ಪ್ರಶ್ನೆ ವ್ಯಾಪಕವಾಗಿದೆ. ಸದ್ಯ ಇದನ್ನು ಯುರೋಪ್ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ನಿಸ್ಸಾನ್ ಕಂಪನಿ ಹೇಳಿದೆ. ಆದರೆ ಭಾರತದಲ್ಲಿ ಸದ್ಯ ಇವಿ ಕಾರುಗಳಿಗೆ ಬೇಡಿಕೆ ಹೆಚ್ಚು ಇದ್ದು ಮತ್ತು ಸರ್ಕಾರವೂ ಈ ಮಾದರಿಯ ಕಾರುಗಳನ್ನು ಖರೀದಿಸಲು ಉತ್ತೇಜಿಸುತ್ತಿರುವುದರಿಂದ, ಇದು ಭಾರತದ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಎಂದೇ ಹೇಳಲಾಗುತ್ತಿದೆ. ಆದರೆ ಭಾರತಕ್ಕೆ ಎಂದು? ಎಂಬ ಪ್ರಶ್ನೆಗೆ ಮಾತ್ರ ಈವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.