ಬೈಕ್ ಸವಾರಿ ಎಷ್ಟು ಮೋಜೋ, ಅಷ್ಟೇ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡು ಹೋಗುವ ಸಾಹಸ. ಹೀಗಾಗಿ ಬೈಕ್ ಸವಾರರು ಪ್ರಯಾಣಿಸುವ ದೂರ ಹಾಗೂ ರಸ್ತೆಗೆ ಅನುಗುಣವಾಗಿ ಸೂಕ್ತ ಗೇರ್‌ಗಳನ್ನು ಹೊಂದುವುದು ಅತ್ಯಗತ್ಯ. ಅದರಲ್ಲೂ ಶಿರಸ್ತ್ರಾಣ ಎಂದೇ ಕರೆಯಲಾಗುವ ಹೆಲ್ಮೆಟ್ ಇಲ್ಲದೆ ಬೈಕ್ ಪ್ರಯಾಣ, ಅಪಾಯಕ್ಕೆ ಆಹ್ವಾನವಿದ್ದಂತೆ. ಹೀಗಾಗಿ ಸೂಕ್ತ ಹೆಲ್ಮೆಟ್‌ನ ಆಯ್ಕೆ ಹೇಗಿರಬೇಕು. ಮಾರುಕಟ್ಟೆಯಲ್ಲಿ ಯಾವ ಬಗೆಯ ಹೆಲ್ಮೆಟ್‌ಗಳು ಲಭ್ಯ. ಅವುಗಳ ಬೆಲೆ ಮತ್ತು ಸೌಕರ್ಯಗಳ ಮಾಹಿತಿ ಇಲ್ಲಿದೆ.
ದ್ವಿಚಕ್ರ ವಾಹನಗಳಿಗೆ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯ. ಆದರೆ ಅವುಗಳಲ್ಲಿ ಗುಣಮಟ್ಟಕ್ಕೆ ಒತ್ತು ನೀಡಿ ಉತ್ತಮವಾದದ್ದನ್ನು ಆಯ್ಕೆ ಮಾಡುವುದು ಹೇಗೆ ಎಂಬ ಗೊಂದಲ ಎಲ್ಲಾ ಬೈಕ್ ಸವಾರರಲ್ಲೂ ಇರುತ್ತದೆ.
ಅಂತಾರಾಷ್ಟ್ರೀಯ ಮಟ್ಟದ ಹೆಲ್ಮೆಟ್ ಬ್ರ್ಯಾಂಡ್‌ಗಳು
- ಶೋಯಿ (Shoei): ಇದು ಜಪಾನ್‌ನ ಪ್ರೀಮಿಯಂ ಬ್ರ್ಯಾಂಡ್ ಆಗಿದ್ದು, ಸುಧಾರಿತ ತಂತ್ರಜ್ಞಾನ, ಗಾಳಿಯಾಡಲು ಉತ್ತಮ ವ್ಯವಸ್ಥೆ, ಶಬ್ದ ನಿಯಂತ್ರಣ ಮತ್ತು ಅತ್ಯುತ್ತಮ ಸೌಲಭ್ಯಕ್ಕಾಗಿ ಜನಪ್ರಿಯತೆ ಪಡೆದುಕೊಂಡಿದೆ.
- ಎಚ್‌ಜೆಸಿ (HJC): ಕೊರಿಯನ್ ಮೂಲದ ಈ ಹೆಲ್ಮೆಟ್ ಉತ್ತಮ ಬೆಲೆ, ಗುಣಮಟ್ಟದ ನಿರ್ಮಾಣ ಮತ್ತು ಏರ್-ಚಾನೆಲಿಂಗ್ ವ್ಯವಸ್ಥೆಯಂತಹ ಸುಧಾರಿತ ವೈಶಿಷ್ಟ್ಯಗಳಿಂದ ಗುರುತಿಸಲ್ಪಟ್ಟಿದೆ. HJC FGST ಮತ್ತು IS MAX 2 ನಂತಹ ಮಾದರಿಗಳು ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿವೆ.
- ಎಲ್ಎಸ್2 (LS2): ಇದು ಜಾಗತಿಕ ಬ್ರ್ಯಾಂಡ್ ಆಗಿದ್ದು, ಹಗುರವಾದ ವಿನ್ಯಾಸ ಮತ್ತು ಗಟ್ಟುಮುಟ್ಟಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ FF324 ಫ್ಲಿಪ್-ಅಪ್ ಹೆಲ್ಮೆಟ್ ಉತ್ತಮ ಗಾಳಿಯ ಪ್ರಸರಣ ಮತ್ತು ಸೌಕರ್ಯಕ್ಕಾಗಿ ಹೆಸರುವಾಸಿಯಾಗಿದೆ.

ಮಧ್ಯಮ ಶ್ರೇಣಿಯ ಬಜೆಟ್ ಆಯ್ಕೆಗಳು
- ರೀಸ್ ಹೆಲ್ಡೆನ್ (Reise Helden): 2025ರಲ್ಲಿ ಅಡ್ವೆಂಚರ್ ಟೂರಿಂಗ್ ಮತ್ತು ದೀರ್ಘ ಪ್ರಯಾಣಕ್ಕೆ ಇದನ್ನು ಶಿಫಾರಸು ಮಾಡಲಾಗಿದೆ. ಉತ್ತಮ ಬೆಲೆ ಮತ್ತು ಹೊಸ ಮಾದರಿಯ ವೈಶಿಷ್ಟ್ಯಗಳನ್ನು ಹೊಂದಿದೆ.
- ಎಸ್‌ಎಂಕೆ ಸ್ಟೆಲ್ಲಾರ್ ಟ್ರೆಕ್ (SMK Stellar Trek): ಡ್ಯುಯಲ್-ಶೆಲ್ ವಿನ್ಯಾಸ ಮತ್ತು ಗಾಳಿಯಾಡಲು ಉತ್ತಮ ವ್ಯವಸ್ಥೆಯನ್ನು ಹೊಂದಿದೆ. ಭಾರತದ ಹವೆಯ ಪರಿಸ್ಥಿತಿಯಲ್ಲಿ ದೀರ್ಘ ಪ್ರಯಾಣಕ್ಕೆ ಉತ್ತಮವಾಗಿದೆ.
- ಆಕ್ಸರ್ ರೇಜ್ ಆರ್‌ಆರ್3 (Axor Rage RR3): ಇದು ಬಲಿಷ್ಠವಾದ ಎಬಿಎಸ್ ಶೆಲ್, ದೃಢವಾದ ನಿರ್ಮಾಣ ಮತ್ತು ಅತ್ಯುತ್ತಮ ಗಾಳಿ ವ್ಯವಸ್ಥೆಯನ್ನು ಹೊಂದಿದೆ.
- ವೇಗಾ ಇವಿಒ ಬಿಟಿ (Vega EVO BT): ಇದು ಕೈಗೆಟುಕುವ ಬೆಲೆಯ ಆಯ್ಕೆಯಾಗಿದ್ದು, ದೀರ್ಘ ಪ್ರಯಾಣದ ಸಮಯದಲ್ಲಿ ಕರೆಗಳು ಮತ್ತು ಆಡಿಯೊಗಾಗಿ ಬ್ಲೂಟೂತ್ ವೈಶಿಷ್ಟ್ಯವನ್ನು ಒಳಗೊಂಡಿದೆ.
- ಸ್ಟೀಲ್‌ಬರ್ಡ್ ಏರ್ ಏರ್ 0011 (Steelbird Air AIR 0011): ಭಾರತದ ಬಿಸಿ ಹವಾಮಾನವನ್ನು ಎದುರಿಸಲು “ಏರ್ ಬೂಸ್ಟರ್” ಗಾಳಿ ವ್ಯವಸ್ಥೆಯನ್ನು ಬಳಸುತ್ತದೆ.
ದೀರ್ಘ ಪ್ರಯಾಣಕ್ಕೆ ಪರಿಗಣಿಸಬೇಕಾದ ಪ್ರಮುಖ ವೈಶಿಷ್ಟ್ಯಗಳು
- ಗಾಳಿಯಾಡುವ ವ್ಯವಸ್ಥೆ (Ventilation): ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ಸೌಕರ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾಗಿ ಗಾಳಿಯಾಡುವ ವ್ಯವಸ್ಥೆ ಇರುವ ಹೆಲ್ಮೆಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
- ಹಗುರವಾದ ಶೆಲ್‌ಗಳು (Lightweight Shells): ಪಾಲಿಕಾರ್ಬೊನೇಟ್ ಅಥವಾ ಕಾಂಪೋಸಿಟ್ ಫೈಬರ್‌ನಂತಹ ವಸ್ತುಗಳಿಂದ ತಯಾರಿಸಿದ ಹಗುರವಾದ ಹೆಲ್ಮೆಟ್‌ಗಳು ದೀರ್ಘ ಪ್ರಯಾಣದಲ್ಲಿ ಕುತ್ತಿಗೆ ಭಾಗದಲ್ಲಿ ಉಂಟಾಗುವ ಆಯಾಸವನ್ನು ಕಡಿಮೆ ಮಾಡುತ್ತದೆ.
- ಸುರಕ್ಷತಾ ಪ್ರಮಾಣೀಕರಣಗಳು (Safety Certifications): ಹೆಲ್ಮೆಟ್‌ಗಳು ISI ಪ್ರಮಾಣೀಕರಣವನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಜತೆಗೆ, ಹೆದ್ದಾರಿಗಳಲ್ಲಿ ಸಂಚರಿಸುವವರು ಇಸಿಇ (ECE), ಡಿಒಟಿ (DOT) ಅಥವಾ ಸ್ನೆಲ್ (SNELL) ನಂತಹ ಅಂತಾರಾಷ್ಟ್ರೀಯ ಮಾನದಂಡಗಳ ಮಾನ್ಯತೆ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳಿ.
- ಆರಾಮದಾಯಕ ಪ್ಯಾಡಿಂಗ್ (Comfort Padding): ಹೆಲ್ಮೆಟ್‌ನಿಂದ ಸುಲಭವಾಗಿ ತೆಗೆದು ತೊಳೆಯಬಹುದಾದ ಪ್ಯಾಡಿಂಗ್ ಇದೆಯೇ? ದೈನಂದಿನ ಬಳಕೆಯಲ್ಲಿ ನೈರ್ಮಲ್ಯ ಮತ್ತು ಸೌಕರ್ಯವನ್ನು ಖಚಿತಪಡಿಸುತ್ತದೆಯೇ? ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
- ಏರೋಡೈನಾಮಿಕ್ಸ್ (Aerodynamics): ಗಾಳಿಯ ಶಬ್ದವನ್ನು ಮತ್ತು ಅಡೆತಡೆಗಳನ್ನು ಕಡಿಮೆ ಮಾಡಲು ಉತ್ತಮ ಏರೋಡೈನಾಮಿಕ್ ವಿನ್ಯಾಸದ ಹೆಲ್ಮೆಟ್‌ಗಳು ಸಹಾಯಕ.
- ಹೆಚ್ಚುವರಿ ವೈಶಿಷ್ಟ್ಯಗಳು (Extra Features): ಇಂಟಿಗ್ರೇಟೆಡ್ ಸನ್ ವಿಸರ್‌ಗಳು, ಕ್ವಿಕ್-ರಿಲೀಸ್ ವೈಸರ್ ಮತ್ತು ಬ್ಲೂಟೂತ್ ಸಂಪರ್ಕದಂತಹ ವೈಶಿಷ್ಟ್ಯಗಳು ಪ್ರಯಾಣವನ್ನು ಹೆಚ್ಚು ಸರಳಗೊಳಿಸುತ್ತದೆ.
ದೀರ್ಘ ಪ್ರಯಾಣಕ್ಕೆ ಸೂಕ್ತವಾದ ಹೆಲ್ಮೆಟ್‌ಗಳನ್ನು ಆಯ್ಕೆ ಮಾಡಲು, ನಿಮ್ಮ ಬಜೆಟ್ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಈ ಮೇಲಿನ ಅಂಶಗಳನ್ನು ಪರಿಗಣಿಸುವುದು ಮುಖ್ಯ. ಸುರಕ್ಷತೆಗೆ ಆದ್ಯತೆ ನೀಡುವುದರಿಂದ, ಪ್ರಯಾಣವು ಇನ್ನಷ್ಟು ಆಹ್ಲಾದಕರವಾಗಿರುತ್ತದೆ.