Explainer | BH ನೋಂದಣಿ ಲಾಭವೇ? ಯಾರಿಗೆ? ಹೇಗೆ? ಒಂದು ಡೀಟೇಲ್‌ ರಿಪೋರ್ಟ್‌

ಸಾಂದರ್ಭಿಕ ಚಿತ್ರ (ಎಂಎಸ್‌ ಡಿಸೈನರ್‌ ಎಐ)

ರಸ್ತೆಯಲ್ಲಿ ಇತ್ತೀಚೆಗೆ BH ನೋಂದಣಿಯ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬಹಳಷ್ಟು ಜನ ತೆರಿಗೆ ಉಳಿತಾಯಕ್ಕಾಗಿ BH ನೋಂದಣಿ ಲಾಭದಾಯಕ ಎಂದೆನ್ನುತ್ತಾರೆ. ಇನ್ನೂ ಕೆಲವರು ಅದು ಬರೀ ಭ್ರಮೆ. ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುತ್ತಿದ್ದಾರೆ. ವಾಸ್ತವದಲ್ಲಿ ಈ BH ನೋಂದಣಿ ಯಾರಿಗೆ? ಏತಕ್ಕಾಗಿ ಸರ್ಕಾರ ಅದನ್ನು ಜಾರಿಗೆ ತಂದಿದೆ? ಮತ್ತು ಇದರಿಂದ ಎಷ್ಟು ಹಣ ಉಳಿಸಬಹುದು? ಸಾಧನ ಭಾದಕಗಳೇನು ಎಂಬುದು ಈ ಲೇಖನದಲ್ಲಿ ಸಿಗಲಿದೆ.

BH ನೋಂದಣಿ ಉಪಯುಕ್ತವಾಗಿದ್ದು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾವಣೆಯಾಗುವ ಕೇಂದ್ರ ಸರ್ಕಾರ ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚು ಉಪಯುಕ್ತ. ಇವರಿಗೆ ಹಣದೊಂದಿಗೆ ಸಮಯವೂ ಉಳಿತಾಯವಾಗುವುದು ಇದರ ವಿಶೇಷ.

ಹಾಗಿದ್ದರೆ ಇದರ ಪ್ರಮುಖ ಲಾಭಗಳೇನು…?

ರಾಷ್ಟ್ರವ್ಯಾಪಿ ಮಾನ್ಯತೆ: BH ನೋಂದಣಿಯ ವಾಹನವನ್ನು ಭಾರತದೆಲ್ಲೆಡೆ ಅಡೆತಡೆ ಇಲ್ಲದೆ ಬಳಸಬಹುದು. ಒಂದು ರಾಜ್ಯದಿಂದ ಮತ್ತೊಂದಕ್ಕೆ ಸ್ಥಳಾಂತರಗೊಂಡರೆ ಪುನಃ ನೋಂದಣಿಯ ಅಗತ್ಯವಿರುವುದಿಲ್ಲ.

ಸರಳ ತೆರಿಗೆ ರಚನೆ: 15 ವರ್ಷಗಳಿಗೆ ಒಂದೇ ಬಾರಿ ತೆರಿಗೆ ಕಟ್ಟುವ ಬದಲು, ಎರಡು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಪಾವತಿಸಬಹುದು.

ಹಣದ ಉಳಿತಾಯ: BH ಸರಣಿಯ ತೆರಿಗೆ ದರಗಳು ರಾಜ್ಯದ ಸಾರಿಗೆ ಇಲಾಖೆ ವಿಧಿಸುವ ನೋಂದಣಿ ಶುಲ್ಕಕ್ಕಿಂತ ಕಡಿಮೆ. ವಾಹನ ಮೂಲ ಬೆಲೆಯನ್ನು ಆಧರಿಸಿ ತೆರಿಗೆ ಲೆಕ್ಕ ಹಾಕಲಾಗುತ್ತದೆ.

BH ನೋಂದಣಿಗೆ ಯಾರು ಅರ್ಹರು?: ಕೇಂದ್ರ/ರಾಜ್ಯ ಸರ್ಕಾರಿ ನೌಕರರು, ಸೇನೆಯ ಸಿಬ್ಬಂದಿ, ಮತ್ತು ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಶಾಖೆಗಳಿರುವ ಖಾಸಗಿ ಕಂಪನಿಗಳ ನೌಕರರು. ಆದರೆ ಇದು ಹಳೆಯ ಅಥವಾ ವಾಣಿಜ್ಯ ವಾಹನಗಳಿಗೆ ಲಭ್ಯವಿಲ್ಲ.

ಹಣದ ಉಳಿತಾಯ ಹೇಗೆ?

ಸಾಮಾನ್ಯ ವಾಹನಗಳ ನೋಂದಣಿ: ರಾಜ್ಯ ಸರ್ಕಾರಗಳು ವಿಧಿಸುವ ರಸ್ತೆ ಸಾರಿಗೆ ತೆರಿಗೆಯು ದುಬಾರಿಯಾಗಿದ್ದು, 15 ವರ್ಷಗಳ ಅವಧಿಗೆ ಒಂದು ಬಾರಿ ಕಟ್ಟಬೇಕು. ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಅಂದರೆ ವಾಹನದ ಬೆಲೆಯ ಶೇ 13ರಿಂದ 15ರಷ್ಟನ್ನು ಪಾವತಿಸಬೇಕು.

ಉಳಿತಾಯ ಎಲ್ಲಿ: ಇಲ್ಲಿ ಒಂದು ಉದಾಹರಣೆಯನ್ನು ಗಮನಿಸುವುದಾದರೆ ₹10 ಲಕ್ಷ ಮೌಲ್ಯದ ಕಾರು ಖರೀದಿಸಿ BH ನೋಂದಣಿ ಮಾಡಿಸಿದರೆ 15 ವರ್ಷಗಳಿಗೆ (ಹಂತ ಹಂತವಾಗಿ) ₹1.52 ಲಕ್ಷ ತೆರಿಗೆ ಕಟ್ಟಬೇಕು. ಆದರೆ ರಾಜ್ಯ ಸರ್ಕಾರದ ನೋಂದಣಿಯಲ್ಲಿ ಅದೇ ಕಾರಿಗೆ ₹1.9 ಲಕ್ಷ ಕಟ್ಟಬೇಕು. ಹೀಗಾಗಿ ಇಲ್ಲಿ ₹40 ಸಾವಿರ ಉಳಿತಾಯವಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಪ್ರತಿ ಎರಡು ವರ್ಷಗಳಿಗೊಮ್ಮೆ ನೋಂದಣಿ ನವೀಕರಣ ಅಗತ್ಯ. ರಾಜ್ಯದಿಂದ ರಾಜ್ಯಕ್ಕೆ ತೆರಳಿದರೆ ಅಲ್ಲಿನ ನೋಂದಣಿ ಶುಲ್ಕ ಕಟ್ಟುವ ಹಣ ಮತ್ತು ಸಮಯ ಉಳಿತಾಯವಾಗುತ್ತದೆ.

ಕರ್ನಾಟಕ ರಾಜ್ಯವನ್ನೇ ಪರಿಗಣಿಸಿ ಹೇಳುವುದಾದರೆ ₹5 ಲಕ್ಷದೊಳಗಿನ ಕಾರುಗಳಿಗೆ ಶೇ 13ರಷ್ಟು ನೋಂದಣಿ ಶುಲ್ಕವಿದೆ. ₹5–₹10ಲಕ್ಷದವರೆಗೆ ಶೇ 14, ₹10–₹20 ಲಕ್ಷದೊರಗೆ ಶೇ 17, ₹20 ಲಕ್ಷ ಮೇಲಿನ ವಾಹನಗಳಿಗೆ ಶೇ 18ರಷ್ಟು ತೆರಿಗೆ ಇದೆ.

₹25ಲಕ್ಷದೊಳಗಿನ ಬ್ಯಾಟರಿ ಚಾಲಿತ EV ವಾಹನಗಳಿಗೆ ಶೇ 4ರಷ್ಟು ನೋಂದಣಿ ಶುಲ್ಕವಿದೆ.

ಆದರೆ BH ನೋಂದಣಿಗೆ ಶೇ 8ರಷ್ಟು ತೆರಿಗೆ ಇದೆ. ₹10–₹20 ಲಕ್ಷದ ವಾಹನಕ್ಕೆ ಶೇ 10, ₹20 ಲಕ್ಷ ಮೇಲಿನ ವಾಹನಗಳಿಗೆ ಶೇ 12ರಷ್ಟಿದೆ. ಡೀಸೆಲ್ ಎಂಜಿನ್‌ ಕಾರುಗಳಿಗೆ ಹೆಚ್ಚುವರಿಯಾಗಿ ಶೇ 2ರಷ್ಟು ತೆರಿಗೆ ನೀಡಬೇಕು. ಆದರೆ ವಿದ್ಯುತ್ ಚಾಲಿತ ವಾಹನಗಳಿಗೆ ಇರುವ ತೆರಿಗೆಗಿಂತ ಶೇ 2ರಷ್ಟು ಕಡಿಮೆ.

BH ನೋಂದಣಿಯು ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಗೊಳ್ಳುವ ಅರ್ಹ ಬಳಕೆದಾರರಿಗೆ ಆರ್ಥಿಕವಾಗಿ ಹೆಚ್ಚಿನ ಲಾಭ ತಂದುಕೊಡಲಿದೆ. ಆದರೆ ಕರ್ನಾಟಕದಲ್ಲೇ ಕಾರುನ್ನು ಇಟ್ಟುಕೊಳ್ಳುವವರಿಗೆ ರಾಜ್ಯ ಸರ್ಕಾರದ ರಸ್ತೆ ಸಾರಿಗೆ ಇಲಾಖೆಯ ನೋಂದಣಿಯೇ ಉತ್ತಮ ಆಯ್ಕೆ ಎಂಬುದು ತಜ್ಞರ ಅಭಿಪ್ರಾಯ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ