Explainer | E20 ಎಥನಾಲ್ ಪೆಟ್ರೋಲ್: ನಿಮ್ಮ ವಾಹನಕ್ಕೆ ಹಾನಿಯೆ?

ಭಾರತದಲ್ಲಿ ವಾಹನ ಕ್ಷೇತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ. ಹೊಸ ವಾಹನಗಳು ಮಾರುಕಟ್ಟೆ ಪ್ರವೇಶಿಸಿದಂತೆ ಖರೀದಿ ಭರಾಟೆಯೂ ಜೋರಾಗಿದೆ. ಕರ್ನಾಟಕದಲ್ಲಿ ಜನರು ಇರುವಷ್ಟೇ ಸಂಖ್ಯೆಲ್ಲಿ ವಾಹನಗಳೂ ಇವೆ ಎಂದು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದು ಅಕ್ಷರಶಃ ನಿಜವಂತಿದೆ. ಆದರೆ ಹೆಚ್ಚುತ್ತಿರುವ ವಾಹನಗಳಿಗೆ ತಕ್ಕಂತೆ ಇಂಧನ ಬೇಡಿಕೆಯೂ ಹೆಚ್ಚಿದೆ. ದೇಶ ಸದ್ಯ ಶೇ 85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಹೊರೆ ಇಳಿಸಲು ಮತ್ತು ವಾತಾವರಣಕ್ಕೆ ಹೊರಸೂಸುವ ಇಂಗಾಲವನ್ನು ತಗ್ಗಿಸಲು ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಎಥನಾಲ್‌ ಮಿಶ್ರಣ ಮಾಡುವ ಪ್ರಮಾಣ ಹೆಚ್ಚಿಸಿರುವ ಸರ್ಕಾರದ ಕ್ರಮ ಈಗ ವಾಹನ ಮಾಲೀಕರ ಸಿಟ್ಟಿಗೆ ಕಾರಣವಾಗಿದೆ.

ಪೆಟ್ರೋಲ್‌ ವಾಹನಗಳ ಮಾಲೀಕರು, ಚಾಲಕರು ಪ್ರತಿ ದಿನ ಪೆಟ್ರೋಲ್‌ ಬಂಕ್‌ಗಳಲ್ಲಿ ಅಲ್ಲಿನ ಸಿಬ್ಬಂದಿಯೊಂದಿಗೆ ಜಗಳವಾಡುವ ಪರಿಸ್ಥಿತಿ ತಲೆದೋರಿದೆ. ಇ20 ಪೆಟ್ರೋಲ್‌ ಸರಿ ಇಲ್ಲ. ಎಥೆನಾಲ್‌ ಬೆರೆಸದ ಪೆಟ್ರೋಲ್‌ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಅವರ ಕೋಪಕ್ಕೆ ಕಾರಣವೂ ಇದೆ. ಇ20 ಪೆಟ್ರೋಲ್‌ ಪೂರೈಕೆ ಆರಂಭವಾದ ನಂತರ ವಾಹನಗಳ ಕಾರ್ಯಕ್ಷಮತೆ ಕುಗ್ಗಿದೆ. ಎಂಜಿನ್‌ನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿವೆ. ತುಂಬಾ ಹಳೆಯ ವಾಹನಗಳ ಎಂಜಿನ್‌ಗಳು ಹಾಳಾಗಿದ್ದೂ ಇದೆ. ಇದರಿಂದ ವಾಹನಗಳ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದ್ದು, ಜನರ ಜೇಬಿಗೆ ಹೊರೆಯಾಗಲು ಆರಂಭಿಸಿದೆ. 

ದೇಶದಲ್ಲಿರುವ ಪೆಟ್ರೋಲ್‌, ಡೀಸೆಲ್‌ ಮತ್ತು ಇತರ ಇಂಧನ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಭಾರತವು ಶೇ 85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೊರದೇಶಗಳಿಂದ ತೈಲದ ಖರೀದಿಯನ್ನು ಕಡಿಮೆ ಮಾಡುವುದರ ಜೊತೆಗೆ ಇಂಗಾಲದ ಹೊರಸೂಸುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಪರಿಸರ ಸ್ನೇಹಿ ಇಂಧನ ಬಳಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಅದರಲ್ಲೊಂದು, ಪೆಟ್ರೋಲ್‌ಗೆ ಸಸ್ಯಜನ್ಯವಾದ ಎಥೆನಾಲ್‌ ಅನ್ನು ಬೆರೆಸಿ ಮಾರಾಟ ಮಾಡುವುದು. 2001ರಿಂದಲೂ ಈ ಕಾರ್ಯಕ್ರಮ ಜಾರಿಯಲ್ಲಿದೆ. ಪೆಟ್ರೋಲ್‌ಗೆ ಮಿಶ್ರಣ ಮಾಡುವ ಎಥೆನಾಲ್‌ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸುತ್ತಾ ಬರಲಾಗಿದ್ದು, ಅದೀಗ ಶೇ 20ಕ್ಕೆ ತಲುಪಿದೆ. 

2000ದ ದಶಕದಲ್ಲಿ ಭಾರತದಲ್ಲಿ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಪೂರೈಕೆ ಆರಂಭವಾಯಿತು. ಆರಂಭದಲ್ಲಿ ಶೇ 5ರಷ್ಟಿದ್ದ ಎಥೆನಾಲ್‌ ಪ್ರಮಾಣವನ್ನು ನಂತರ ಶೇ 10ಕ್ಕೆ ಏರಿಸಲಾಯಿತು. ಇತ್ತೀಚಿನವರೆಗೂ ಈ ಪೆಟ್ರೋಲ್‌ ಅನ್ನೇ ಗ್ರಾಹಕರು ಬಳಸುತ್ತಿದ್ದರು. ಈ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಿಸಿದಾಗ ಸಮಸ್ಯೆ ತಲೆದೋರಿದೆ. 2023ರ ಏಪ್ರಿಲ್‌ ನಂತರ ತಯಾರಿಸಲಾದ ವಾಹನಗಳು ಇ20 ಪೆಟ್ರೋಲ್‌ ಬಳಕೆಗೆ ಯೋಗ್ಯವಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಹಳೆಯ ವಾಹನಗಳಿಗೆ ಎಥನಾಲ್ ಮಿಶ್ರಿತ ಪೆಟ್ರೋಲ್‌ ಹೊಂದಿಕೆಯಾಗುತ್ತಿಲ್ಲ ಎಂಬುದು ವಾಹನ ಉದ್ಯಮದ ತಜ್ಞರು ಹಾಗೂ ಗ್ರಾಹಕರ ಅಭಿಪ್ರಾಯ. ಬಿಎಸ್‌– 6 ಹಂತದ ವಾಹನಗಳಲ್ಲೂ ಸಮಸ್ಯೆಗಳು ಕಾಣಿಸಿಕೊಂಡಿವೆ. 2023ರ ಏಪ್ರಿಲ್‌ ನಂತರ ತಯಾರಿಸಲಾದ ವಾಹನಗಳಲ್ಲಿ, ವಾಹನವು ಇ5, ಇ10 ಪೆಟ್ರೋಲ್‌ ಬಳಸಲು ಯೋಗ್ಯ ಎಂದಷ್ಟೇ ಇದೆ. ಇತ್ತೀಚೆಗೆ ತಯಾರಾಗುತ್ತಿರುವ ವಾಹನಗಳ ಟ್ಯಾಂಕ್‌ ಮುಚ್ಚಳದಲ್ಲಿ ‘ಇ20 ಪೆಟ್ರೋಲ್‌ ಬಳಸಲು ಅರ್ಹ’ ಎಂಬ ಉಲ್ಲೇಖ ಇದೆ. 

E20 ನಿಮ್ಮ ವಾಹನಕ್ಕೆ ಹಾನಿ ಮಾಡುತ್ತದೆಯೆ?

ಇ20 ಪೆಟ್ರೋಲ್ ಬಳಸುವುದರಿಂದ ವಾಹನಗಳಿಗೆ ತಕ್ಷಣ ಯಾವುದೇ ಹಾನಿ ಇಲ್ಲ ಎಂದು SIAM ಮತ್ತು ARAI ಹೇಳಿವೆ. 2023ಕ್ಕೂ ಹಿಂದೆ ತಯಾರಾದ ವಾಹನಗಳೂ E20 ಬಳಸಬಹುದು. ಇದರಿಂದ ಶೇ 4ರಿಂದ 6ರಷ್ಟು ಮೈಲೇಜ್ ಕಡಿಮೆಯಾಗಬಹುದು. ಹಳೆಯ ರಬ್ಬರ್ ಭಾಗಗಳು ಬೇಗ ಹಾಳಾಗಬಹುದು. ಇಂಧನ ಫಿಲ್ಟರ್ ಶೀಘ್ರ ಬದಲಾವಣೆ ಅಗತ್ಯ ಬೀಳಬಹುದು.‌

ಸಾಮಾನ್ಯ ಆತಂಕಗಳೇನು?

ಇ20 ಪೆಟ್ರೋಲ್ ಬಳಸಿ ಎಂಜಿನ್ ಹಾಳಾದರೆ..?

– ಇ20 ಬಳಸಿದರೆ ವಾರಂಟಿ ಮತ್ತು ವಿಮೆ ಮಾನ್ಯ ಎಂದು ಸರ್ಕಾರ ಮತ್ತು ಕಂಪನಿಗಳು ಸ್ಪಷ್ಟಪಡಿಸಿವೆ

ಇಂಧನ ಫಿಲ್ಟರ್‌ ಜಾಮ್‌ ಆದರೆ..?

– ಹಳೆಯ ವಾಹನಗಳಲ್ಲಿ ಪ್ರಾರಂಭದಲ್ಲಿ ಫಿಲ್ಟರ್‌ ಬದಲಾವಣೆ ಸಹಾಯಕ.

ನಿರ್ವಹಣಾ ಸಲಹೆಗಳು

  • E20 ಲೇಬಲ್ ಪರಿಶೀಲಿಸಿ: ಫ್ಯೂಯಲ್ ಕ್ಯಾಪ್/ಮ್ಯಾನುಲ್‌ನಲ್ಲಿ E20 ಇದ್ದರೆ OK.
  • ಟೈರ್ ಪ್ರೆಷರ್, ಏರ್ ಫಿಲ್ಟರ್, ಇಂಜೆಕ್ಟರ್ ಕ್ಲೀನಿಂಗ್—ಮೈಲೇಜ್ ಸುಧಾರಣೆಗೆ ಮುಖ್ಯ.
  • ಹೆಚ್ಚು ಕಾಲ ನಿಲ್ಲಿಸುವ ವಾಹನ: ಟ್ಯಾಂಕ್ ತುಂಬಿರಲಿ, ವಾರಕ್ಕೆ ಒಮ್ಮೆ ಚಾಲನೆ ಮಾಡಿ.

ಎಥನಾಲ್ ಬ್ಲೆಂಡ್‌ ಮಾಡುತ್ತಿರುವ ರಾಷ್ಟ್ರಗಳು ಭಾರತ ಮಾತ್ರವಲ್ಲ. ಬ್ರಜಿಲ್‌, ಅಮೆರಿಕ, ಐರೋಪ್ಯ ರಾಷ್ಟ್ರಗಳೂ ಪೆಟ್ರೋಲ್‌ಗೆ ಎಥನಾಲ್‌ ಸೇರಿಸುತ್ತಿವೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ