ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿಎಸ್‌ಟಿ ಸಮಿತಿಯು ನಾಲ್ಕು ಹಂತಗಳ (ಶೇ 5, 12, 18, 28) ಸರಕು ಮತ್ತು ಸೇವಾ ತೆರಿಗೆಯನ್ನು ಸರಳಗೊಳಿಸಿದೆ. ಈಗ ಶೇ 5 ಮತ್ತು ಶೇ 18 ಎಂಬ ಹಂತಗಳನ್ನಷ್ಟೇ ಉಳಿಸಿದೆ. ಇದರ ಬೆನ್ನಲ್ಲೇ ಪ್ರಮುಖ ವಾಹನ ತಯಾರಕರು ಕಾರುಗಳ ಬೆಲೆ ಇಳಿಸಿ, ಗ್ರಾಹಕರಿಗೆ ಹಬ್ಬದ ಉಡುಗೊರೆ ನೀಡಲು ಸಜ್ಜಾಗಿವೆ.
ಹಿಂದೆ ಇದ್ದ ಶೇ 28ರಷ್ಟಿದ್ದ ತೆರಿಗೆಯನ್ನು ಈಗ ಶೇ 18ಕ್ಕೆ ಇಳಿಸಿದೆ. ಇದು ನವರಾತ್ರಿಯ ಮೊದಲ ದಿನವಾದ ಸೆ. 22ರಿಂದ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ ಬೆಲೆ ಇಳಿಸಿದ ಕಾರುಗಳ ಪಟ್ಟಿ ಈ ಕೆಳಗಿನಂತಿದೆ.

ಹ್ಯುಂಡೇ
ದಕ್ಷಿಣ ಕೊರಿಯಾದ ಹ್ಯುಂಡೇ ಕಂಪನಿಯು ₹2.4 ಲಕ್ಷದಷ್ಟು ದರ ಕಡಿತ ಮಾಡುತ್ತಿರುವುದಾಗಿ ಭಾನುವಾರ ಘೋಷಿಸಿದೆ. ಟುಸಾನ್ ಮಾದರಿಯ ಕಾರಿನ ಬೆಲೆ ಸುಮಾರು ₹30 ಲಕ್ಷದಷ್ಟಿದೆ. ಹೊಸ ತೆರಿಗೆ ದರದ ಅನ್ವಯ ₹2.4 ಲಕ್ಷದಷ್ಟು ಕಡಿಮೆಯಾಗಲಿದೆ.
ವೆನ್ಯು ಕಾರಿನ ಬೆಲೆ ₹1.23ರಷ್ಟು ಕಡಿಮೆಯಾಗಲಿದೆ. ನಿಯಾಸ್ ಕಾರಿನ ಬೆಲೆ ₹73,808ರಷ್ಟು ಮತ್ತು ಐ20 ಕಾರಿನ ಬೆಲೆ ₹98,053ರಷ್ಟು ಕಡಿಮೆಯಾಗಲಿದೆ.

ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ತಮ್ಮ ವಾಣಿಜ್ಯ ವಾಹನಗಳ ಮೇಲೆ ₹4.65 ಲಕ್ಷದಷ್ಟು ಕಡಿತ ಮಾಡುವುದಾಗಿ ಹೇಳಿದೆ. ವಾಣಿಜ್ಯ ಉದ್ದೇಶ ಭಾರೀ ವಾಹನಗಳ ಬೆಲೆ ₹2.8 ಲಕ್ಷದಿಂದ ₹4.65 ಲಕ್ಷದಷ್ಟು ಕಡಿತವಾಗುವ ಸಾಧ್ಯತೆ ಇದೆ. ಬಸ್ ಮತ್ತು ವ್ಯಾನ್‌ಗಳ ಬೆಲೆ ₹1.20ಲಕ್ಷದಿಂದ ₹4.35 ಲಕ್ಷದವರೆಗೆ ಕಡಿಮೆಯಾಗಲಿದೆ.
ಟಾಟಾ ಮೋಟಾರ್ಸ್‌ನ ಸಣ್ಣ ವಾಣಿಜ್ಯ ಉದ್ದೇಶದ ವಾಹನಗಳ ಬೆಲೆ ₹30 ಸಾವಿರದಿಂದ ₹1.1 ಲಕ್ಷದವರೆಗೆ ಕಡಿಮೆಯಾಗಲಿದೆ.
ಕಾರುಗಳ ಬೆಲೆಯನ್ನೂ ಟಾಟಾ ಮೋಟಾರ್ಸ್ ₹1.55 ಲಕ್ಷದವರೆಗೆ ಕಡಿತಗೊಳಿಸಿದೆ. ಟಾಟಾ ಟಿಯಾಗೊ ಬೆಲೆ ₹75 ಸಾವಿರದಷ್ಟು ಕಡಿಮೆಯಾಗಲಿದೆ. ನೆಕ್ಸಾನ್ ಮಾದರಿಯ ಕಾರಿನ ಬೆಲೆ ₹1.55 ಲಕ್ಷದಷ್ಟು, ಟಾಟಾ ಪಂಚ್ ಕಾರು ₹85 ಸಾವಿರದಷ್ಟು ಅಗ್ಗವಾಗಲಿದೆ.

Nissan ಮೋಟಾರ್ ಇಂಡಿಯಾ
ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ತನ್ನ ಎಸ್‌ಯುವಿ ಮಾದರಿ ಮ್ಯಾಗ್ನೈಟ್‌ನ ಬೆಲೆಯನ್ನು ₹1 ಲಕ್ಷದವರೆಗೆ ಕಡಿಮೆ ಮಾಡುತ್ತಿರುವುದಾಗಿ ಸೋಮವಾರ ಹೇಳಿದೆ. ಇದು ಜಿಎಸ್‌ಟಿಯಿಂದ ಗ್ರಾಹಕರಿಗೆ ಆಗುತ್ತಿರುವ ಲಾಭ ಎಂದಿದೆ.

Mahindra & Mahindra
Mahindra and Mahindra ಕಂಪನಿಯು ತನ್ನ ಕಾರುಗಳ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ₹1.56 ಲಕ್ಷದಷ್ಟು ಕಡಿತ ಮಾಡುವುದಾಗಿ ಕಂಪನಿ ಹೇಳಿದೆ.
ಕಂಬಶ್ಚನ್ ಎಂಜಿನ್ ಕಾರುಗಳ ಮೇಲಿನ ಬೆಲೆಯನ್ನು ಸೆ. 6ರಿಂದ ಕಡಿತ ಮಾಡುತ್ತಿರುವುದಾಗಿ ಮಹೀಂದ್ರಾ ಕಂಪನಿ ಹೇಳಿದೆ.
ಬೊಲೆರೊ/ ನಿಯೊ ಶ್ರೇಣಿಯ ಕಾರುಗಳ ಬೆಲೆಯನ್ನು ₹1.27 ಲಕ್ಷದಷ್ಟು, ಎಕ್ಸ್‌ಯುವಿ 3ಎಕ್ಸ್‌ಒ (ಪೆಟ್ರೋಲ್) ಬೆಲೆಯನ್ನು ₹1.4ಲಕ್ಷದಷ್ಟು, ಎಕ್ಸ್‌ಯುವಿ3ಎಕ್ಸ್‌ಒ (ಡೀಸೆಲ್) ಕಾರಿನ ಮೇಲೆ ₹1.56 ಲಕ್ಷ, ಥಾರ್ 2ಡಬ್ಲೂಡಿ (ಡೀಸೆಲ್) ಬೆಲೆ ₹1.35ಲಕ್ಷ, ಥಾರ್ 4ಡಬ್ಲೂಡಿ (ಡೀಸೆಲ್) ಬೆಲೆಯು ₹1.01ಲಕ್ಷ ಮತ್ತು ಸ್ಕಾರ್ಪಿಯೊ ಕ್ಲಾಸಿಕ್ ಬೆಲೆ ₹1.01ಲಕ್ಷದಷ್ಟು ಕಡಿಮೆಯಾಗಲಿದೆ ಎಂದು ಕಂಪನಿ ಹೇಳಿದೆ.
ಇದೇ ರೀತಿ ಸ್ಕಾರ್ಪಿಯೊ–ಎನ್ ಬೆಲೆ ₹1.45 ಲಕ್ಷದಷ್ಟು, ಥಾರ್ ರಾಕ್ಸ್ ಬೆಲೆ ₹1.33 ಲಕ್ಷ ಮತ್ತು ಎಕ್ಸ್‌ಯುವಿ700 ಬೆಲೆಯು ₹1.43ಲಕ್ಷದಷ್ಟು ಕಡಿಮೆಯಾಗಲಿದೆ.

ರಿನೊ ಇಂಡಿಯಾ
ಫ್ರಾನ್ಸ್ ಮೂಲದ ರಿನೊ ಇಂಡಿಯಾ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ₹96,395ರಷ್ಟು ಕಡಿತ ಮಾಡುವುದಾಗಿ ಘೋಷಣೆ ಮಾಡಿದೆ.
ಟ್ರೈಬರ್ ಮತ್ತು ಕಿಗರ್ ಮಾದರಿ ಒಳಗೊಂಡಿದೆ. ಬೆಲೆ ಇಳಿಕೆಯಿಂದ ಹಬ್ಬದ ಸಂದರ್ಭದಲ್ಲಿ ಕಂಪನಿಯು ಹೆಚ್ಚಿನ ಮಾರಾಟದ ನಿರೀಕ್ಷೆಯಲ್ಲಿದೆ. ಪುಟ್ಟ ಕಾರು ಕ್ವಿಡ್‌ನ ಬೆಲೆಯು ₹55,095 ಸಾವಿರದಷ್ಟು ಕಡಿಮೆಯಾಗಲಿದೆ. ಟ್ರೈಬರ್ ಕಾರಿನ ಬೆಲೆ ₹80,195 ಮತ್ತು ಕಿಗರ್ ಬೆಲೆಯು ₹96,395ದಷ್ಟು ಕಡಿಮೆ ಮಾಡುತ್ತಿರುವುದಾಗಿ ಕಂಪನಿ ಹೇಳಿದೆ.

ಟೊಯೊಟಾ
ಟೊಯೊಟಾ ಕಿರ್ಲೊಸ್ಕರ್ ಮೋಟಾರ್ ಕಂಪನಿಯು ತನ್ನ ವಾಹನಗಳ ಮೆಲೆ ₹3,49 ಲಕ್ಷದವರೆಗೂ ಬೆಲೆ ಕಡಿಮೆ ಮಾಡುತ್ತಿರುವುದಾಗಿ ಹೇಳಿದೆ.
ಗ್ಲಾಂಜಾ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಯಲ್ಲಿ ₹85,300ರಷ್ಟು, ಟೈಸರ್ ಕಾರಿನ ಬೆಲೆಯಲ್ಲಿ ₹1.11ಲಕ್ಷ, ರುಮಿಯೊ ಬೆಲೆಯಲ್ಲಿ ₹48,700, ಹೈರೈಡರ್ ಕಾರಿನ ಬೆಲೆಯಲ್ಲಿ ₹65,400, ಕ್ರಿಸ್ಟಾ ಮೇಲೆ ₹1.8ಲಕ್ಷ, ಹೈಕ್ರಾಸ್ ಕಾರಿನ ಮೇಲೆ ₹1.15ಲಕ್ಷ ಮತ್ತು ಫಾರ್ಚೂನರ್ ಕಾರಿನ ಬೆಲೆ ₹3.49 ಲಕ್ಷದಷ್ಟು ಕಡಿತ ಮಾಡುತ್ತಿರುವುದಾಗಿ ಕಂಪನಿ ಹೇಳಿದೆ.
ಅದೇ ರೀತಿ ಲೆಜೆಂಡರ್ ಕಾರಿನ ಬೆಲೆ ಮೇಲೆ ₹3.34ಲಕ್ಷದಷ್ಟು, ಹಿಲಕ್ಸ್ ಕಾರಿನ ಬೆಲೆಯಲ್ಲಿ ₹2.52 ಲಕ್ಷದಷ್ಟು, ಕ್ಯಾಮ್ರಿ ಬೆಲೆ ₹1.01ಲಕ್ಷದಷ್ಟು ಹಾಗೂ ವೆಲ್‌ಫೈರ್ ಕಾರಿನ ಮೇಲೆ ₹2,78ಲಕ್ಷದಷ್ಟು ಬೆಲೆ ಕಡಿತ ಘೋಷಿಸಿದೆ.

BMW
ವಿಲಾಸಿ ಕಾರುಗಳ ತಯಾರಿಕಾ ಕಂಪನಿ ಬಿಎಂಡಬ್ಲೂ ತನ್ನ ಕಾರುಗಳ ಮೇಲೆ ಬರೋಬ್ಬರಿ ₹8.9 ಲಕ್ಷದಷ್ಟು ಬೆಲೆ ಕಡಿತ ಘೋಷಿಸಿದೆ.

Lexus
ಜಿಎಸ್‌ಟಿ ಕಡಿತದ ಬೆನ್ನಲ್ಲೇ ಲೆಕ್ಸಸ್ ಕಂಪನಿಯು ತನ್ನ ವಿವಿಧ ಮಾದರಿಗಳ ಮೇಲೆ ₹20.8 ಲಕ್ಷದಷ್ಟು ದರ ಕಡಿತ ಮಾಡುತ್ತಿರುವುದಾಗಿ ಸೋಮವಾರ ಘೋಷಿಸಿದೆ. ಪರಿಷ್ಕೃತ ದರವು ಸೆ. 22ರಿಂದ ಜಾರಿಗೆ ಬರಲಿದೆ. ಇದರಡಿ ಕಂಪನಿಯ 6 ಪ್ರಮುಖ ಮಾದರಿಯಲ್ಲಿ ಸೆಡಾನ್ ಇಎಸ್300ಎಚ್ ಮೇಲೆ ₹.147 ಲಕ್ಷದಷ್ಟು ಹಾಗೂ ಎಸ್‌ಯುವಿ ಎಲ್‌ಎಕ್ಸ್ 500ಡಿ ಮಾದರಿಯ ಮೇಲೆ ₹20.8 ಲಕ್ಷದಷ್ಟು ಬೆಲೆ ಕಡಿತಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.

Audi
ಜರ್ಮನಿಯ ವಿಲಾಸಿ ಕಾರು ತಯಾರಿಕಾ ಕಂಪನಿ ಔಡಿ ಕೂಡಾ ಜಿಎಸ್‌ಟಿ ಕಡಿತದ ಲಾಭವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ತನ್ನ ವಿವಿಧ ಶ್ರೇಣಿಯ ಕಾರುಗಳಿಗೆ ₹2.6 ಲಕ್ಷದಿಂದ ₹7.8 ಲಕ್ಷವರೆಗೆ ಬೆಲೆ ಕಡಿತಗೊಳಿಸುತ್ತಿರುವುದಾಗಿ ಕಂಪನಿ ಹೇಳಿದೆ. ಹೊಸ ದರಪಟ್ಟಿಯಂತೆ ಕಂಪನಿಯು ತನ್ನ ಎಸ್‌ಯುವಿ ಕ್ಯೂ3 ಬೆಲೆ ₹43.07ಲಕ್ಷಕ್ಕೆ ಇಳಿಸಿದೆ. ಇದರ ಬೆಲೆ ಈ ಮೊದಲು ₹46.14 ಲಕ್ಷದಷ್ಟಿತ್ತು.
ಅದರಂತೆಯೇ ಎಸ್‌ಯುವಿ ಕ್ಯೂ8 ಮಾದರಿಯ ಕಾರಿನ ಬೆಲೆ ₹1.18 ಕೋಟಿಯಿಂದ ₹1.1 ಕೋಟಿಗೆ ಇಳಿಸಿದೆ. ಅದರಂತೆಯೇ ಕ್ಯೂ5 ಮತ್ತು ಕ್ಯೂ7 ಹಾಗೂ ಸೆಡಾನ್ ಮಾದರಿಗಳಾದ ಎ4 ಮತ್ತು ಎ6 ಕಾರುಗಳ ಬೆಲೆಯೂ ಇಳಿದಿದೆ.

Kia
ದಕ್ಷಿಣ ಕೊರಿಯಾದ ಕಿಯಾ ಕಂಪನಿಯು ಜಿಎಸ್‌ಟಿ ಇಳಿಕೆಯಿಂದ ತಗ್ಗಿದ ಕಾರಿನ ಬೆಲೆಯಲ್ಲಿ ₹4.48 ಲಕ್ಷದಷ್ಟು ಕಡಿಮೆ ಮಾಡಿದೆ.

JSW MG Motor
ಜೆಎಸ್‌ಡಬ್ಲೂ ಎಂಜಿ ಮೋಟಾರ್ ಕಂಪನಿಯು ಸೆ. 7ಕ್ಕೆ ಅನ್ವಯಿಸುವಂತೆ ತನ್ನ ಕಾರುಗಳ ಬೆಲೆಯಲ್ಲಿ ₹54 ಸಾವಿರದಿಂದ ₹3.04ಲಕ್ಷದಷ್ಟು ಕಡಿತ ಮಾಡಿದೆ.