ನಿಸ್ಸಾನ್ ಮೋಟಾರ್ ಇಂಡಿಯಾ ಕಾಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗೆ ವೇದಿಕೆ ಸಜ್ಜುಗೊಳಿಸಿದೆ. ಟೆಕ್ಟಾನ್ ಎಂಬ ಹೆಸರಿನ ಈ ಹೊಸ ಎಸ್‌ಯುವಿ 2026ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಒಂದು ಜಗತ್ತು ಹಾಗೂ ಒಂದು ಕಾರು ಎಂಬ ಕಲ್ಪನೆಯಡಿ ಈ ಕಾರನ್ನು ನಿಸ್ಸಾನ್ ಅಭಿವೃದ್ಧಿಪಡಿಸಿದೆ. ಫ್ರಾನ್ಸ್‌ನ ರಿನೊ ಜತೆಗೂಡಿರುವ ನಿಸ್ಸಾನ್, ಚೆನ್ನೈನ ಘಟಕದಲ್ಲಿ ಇದನ್ನು ನಿರ್ಮಿಸುತ್ತಿದೆ. ಭಾರತದೊಂದಿಗೆ ಜಗತ್ತಿನ ಇತರ ರಾಷ್ಟ್ರಗಳಿಗೂ ರಫ್ತು ಮಾಡುವ ಯೋಜನೆಯನ್ನು ಕಂಪನಿ ಹೊಂದಿದೆ.

ಇದರ ವಿನ್ಯಾಸಕ್ಕೆ ಆಗಿರುವ ಪ್ರೇರಣೆ
ಟೆಕ್ಟಾನ್ ಕಾರಿನ ವಿನ್ಯಾಸವು ಪ್ಯಾಟ್ರೋಲ್ ಎಸ್‌ಯುವಿಯಿಂದ ಪ್ರೇರಿತವಾಗಿದೆ. ಮುಂಭಾಗದಲ್ಲಿ ಸದೃಢವಾದ ಬಾನೆಟ್, ಸಿ–ಆಕಾರದ ಹೆಡ್‌ಲ್ಯಾಂಪ್‌ಗಳು, ಬೋಲ್ಡ್ ಲುಕ್ ನೀಡುವ ಬಂಪರ್ ಕಾರಿಗೆ ಹೊಸ ರೂಪ ನೀಡಿದೆ.
ಬದಿಯಿಂದಲೂ ಕಟುಮಸ್ತಾಗಿ ಕಾಣುವ ಟೆಕ್ಟಾನ್, ಡಬಲ್–ಸಿ ಮಾದರಿಯ ಬಾಗಿಲು ಹೊಂದಿದೆ. ಇದು ಒಂದರ್ಥದಲ್ಲಿ ಹಿಮಾಲಯದ ಪರ್ವತದಂತೆ ಕಾಣಿಸುತ್ತದೆ. ಹಿಂಭಾಗದಲ್ಲೂ ಸಿ–ಆಕಾರದ ಟೈಲ್ ಲ್ಯಾಂಪ್‌ಗಳನ್ನು ಸಂಪರ್ಕಿಸುವ ಲೈಟ್ ಬಾರ್ ಅಳವಡಿಸಲಾಗಿದೆ. Tekton ಹೆಸರನ್ನು ಟೈಲ್‌ಲೈಟ್ ಮೇಲೆ ಮುದ್ರಿಸಲಾಗಿದೆ.
ಕಂಪನಿಯು ಈವರೆಗೂ ಕಾರಿನ ಹೆಸರು ಹಾಗೂ ವಿನ್ಯಾಸವನ್ನಷ್ಟೇ ಬಹಿರಂಗಗೊಳಿಸಿದ್ದು, ಕಾರಿನಲ್ಲಿ ಅಳವಡಿಸುವ ಎಂಜಿನ್ ಹಾಗೂ ಇತರ ತಾಂತ್ರಿಕ ಮಾಹಿತಿಯನ್ನು ನಿಸ್ಸಾನ್ ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.
ಹ್ಯುಂಡೇ ಕ್ರೇಟಾ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಹಲವರು ನಿಸ್ಸಾನ್ ಟೆಕ್ಟಾನ್‌ಗೆ ಹೇಳುತ್ತಿದ್ದಾರೆ. ಹೀಗಾಗಿ 2026ರಲ್ಲಿ ಭಾರತದ ಎಸ್‌ಯುವಿ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧಿಯೊಂದು ಪ್ರವೇಶ ಪಡೆಯುತ್ತಿದ್ದು, ಗ್ರಾಹಕರಿಗೆ ಆಯ್ಕೆಗಳು ಇನ್ನಷ್ಟು ವಿಸ್ತರಿಸಲಿದೆ.





