ಕಾರು ಖರೀದಿಸುವ ಮೊದಲು ಫೀಚರ್ಗಳನ್ನೇ ಪಟ್ಟಿ ಮಾಡಿ ವೇರಿಯಂಟ್ಗಳ ನಡುವೆ ಹೋಲಿಕೆ ಮಾಡುವುದು ಭಾರತೀಯರಾದ ನಮ್ಮ ಸಾಮಾನ್ಯ ಪದ್ಧತಿ. ಸನ್ರೂಫ್ ಇರಬೇಕು, ವೈರ್ಲೆಸ್ ಚಾರ್ಜರ್ ಬೇಕು, ಪೆಡಲ್ ಶಿಫ್ಟರ್, ಎಲೆಕ್ಟ್ರಿಕಲ್ ಅಡ್ಜಸ್ಟೆಬಲ್ ಸೀಟ್, ಕೀ ಲೆಸ್ ಎಂಟ್ರಿ ಸೇರಿದಂತೆ ಹಲವು ಸೌಕರ್ಯಗಳನ್ನು ಬಯಸುವುದು ಸಾಮಾನ್ಯ.
ಆದರೆ ಇಂಥವುಗಳಲ್ಲಿ ಹಲವು ಅನಗತ್ಯವಾದರೂ, ಅವುಗಳನ್ನೇ ಬಯಸುವವರು ಹಲವರು. ಇಂಥ ಫೀಚರ್ಗಳಿಂದ ಜೇಬಿಗೆ ಹೊರೆಯೇ ಹೊರತು, ಸೌಕರ್ಯಗಳ ಬಳಕೆ ಅಷ್ಟಕ್ಕಷ್ಟೇ. ಅಂಥವುಗಳಲ್ಲಿ ಐದು ಪ್ರಮುಖ ಫೀಚರ್ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Panaromic Sun Roof: ಎಷ್ಟು ಭಾರಿ ಬಳಸಿದ್ದೀರಿ..?
ಭಾರತದಲ್ಲಿ ಸದ್ಯದಲ್ಲಿ ಟ್ರೆಂಡಿಂಗ್ ಇರುವುದು ಸನ್ರೂಫ್ ಅಥವಾ ದೊಡ್ಡದಾದ ಪ್ಯಾನಾರೊಮಿಕ್ ಸನ್ರೂಫ್ನದ್ದು. ಗೆಳತಿ, ಮಕ್ಕಳು ಸನ್ಗ್ಲಾಸ್ ಹಾಕಿಕೊಂಡು ಹೊರಗೆ ನಿಂತು ಬೀಸುವ ಗಾಳಿಗೆ ಮೈಯೊಡ್ಡಿ ಸಾಗುವುದನ್ನು ಟಿವಿಗಳಲ್ಲಿ ನೋಡಿ ಮನಸ್ಸು ಹಾತೊರೆಯುವುದು ಸಹಜ. ಆದರೆ ಸನ್ರೂಫ್ ಹೊಂದಿದ ಕಾರುಗಳನ್ನು ಖರೀದಿಸಿದಿವರನ್ನು ಒಮ್ಮೆ ಕೇಳಿನೋಡಿ. ಕಾರು ತೆಗೆದುಕೊಂಡ ನಂತರ ಎಷ್ಟು ಬಾರಿ ಸನ್ರೂಫ್ ತೆರೆದಿದ್ದಾರೆಂದು.
ಜರ್ಮನ್ ಕಾರುಗಳಲ್ಲಿ ಸನ್ರೂಫ್ ಪರಿಕಲ್ಪನೆಯೇ ಇರಲಿಲ್ಲ. ಸುರಕ್ಷತೆಯ ದೃಷ್ಟಿಯಿಂದಲೂ ಸನ್ರೂಫ್ ಅನಗತ್ಯ ಎನ್ನುತ್ತಾರೆ ತಜ್ಞರು. ಅದರಲ್ಲೂ 30 ಕಿ.ಮೀ. ವೇಗದೊಳಗೆ ಇದ್ದರೆ ಮಾತ್ರ ಸನ್ರೂಫ್ ತೆರೆದು ಹೊರಗೆ ನಿಲ್ಲಬಹುದು. ಆದರೆ ಇದನ್ನೂ ಮೀರಿದರೆ ಅಪಾಯ ಕಟ್ಟಿಟ್ಟಬುತ್ತಿ. ಕಾರಿನಲ್ಲಿ ಸನ್ರೂಫ್ಗಿಂತ ಹೆಚ್ಚು ಆಹ್ಲಾದ ನೀಡುವುದು ಪಕ್ಕದ ಕಿಟಕಿಗಳೆ. ಗಾಳಿಯೂ ಉತ್ತಮವಾಗಿ ಬೀಸುವುದು ಅದರಿಂದಲೇ, ಹೊರನೋಟವೂ ಸುಂದರ,
ಹೀಗಾಗಿ ಕಾರು ಖರೀದಿಯ ಆಯ್ಕೆಯಲ್ಲಿ ಪ್ಯಾನಾರೊಮಿಕ್ ಸನ್ರೂಫ್ ಕೈಬಿಟ್ಟರೆ ಒಂದಷ್ಟು ಹಣ ಉಳಿತಾಯ ಸಾಧ್ಯ.
Pedal Shifter: ಇದ್ದರೂ ಬಳಕೆ ಕಡಿಮೆ
ಆಟೊಮ್ಯಾಟಿಕ್ ಕಾರುಗಳಲ್ಲಿ ಹೆಚ್ಚುವರಿಯಾಗಿ ಲಭ್ಯವಾಗುವ, ಸ್ಟಿಯರಿಂಗ್ ಕೆಳಗೆ ನೀಡಿರುವ ಸೌಲಭ್ಯ ಪೆಡಲ್ ಶಿಫ್ಟರ್. ಖರೀದಿಸಿದ ಕಾರು ಆಟೊಮ್ಯಾಟಿಕ್ ಆದಾಗ, ಪೆಡಲ್ ಶಿಫ್ಟರ್ನ ಅಗತ್ಯವಾದರೂ ಏನಿದೆ ಎಂಬುದನ್ನು ಒಂದು ಬಾರಿ ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ಇದಕ್ಕೆ ಉತ್ತರ ಸಿಗುತ್ತದೆ.
ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವವರಾದರೆ ಪೆಡಲ್ ಶಿಫ್ಟರ್ ಒಂದಷ್ಟು ನೆರವಾಗಬಹುದು. ಇಲ್ಲವಾದಲ್ಲಿ ಇದು ನಿರುಪಯುಕ್ತ ಸಾಧನ. ಹೆಚ್ಚು ದುಡ್ಡು ಖರ್ಚು.
Key start: ಸಮೀಪವಿದ್ದರೆ ಮಾತ್ರ…
ಕಾರಿನ ರಿಮೋಟ್ನಲ್ಲೇ ಎಂಜಿನ್ ಆನ್ ಮಾಡುವ ಸೌಲಭ್ಯ ಇತ್ತೀಚಿನ ಕೆಲ ಕಾರುಗಳಲ್ಲಿ ಲಭ್ಯ. ಕಾರಿನ ಅತಿ ಸಮೀಪ ನಿಂತರೆ ಮಾತ್ರ ಇದು ಕೆಲಸ ಮಾಡಲಿದೆ. ಅಂದರೆ ಕೀ ಮತ್ತು ಕಾರಿನ ಎಂಜಿನ್ ನಡುವೆ ಸಂವಹನ ನಡೆಯಲಿದೆ. ಹಾಗಿದ್ದ ಮೇಲೆ ಕಾರಿನೊಳಗೆ ಕೂತು ಪುಷ್ ಬಟ್ಟನ್ ಅತವಾ ಕೀ ಹಾಕಿ ತಿರುಗಿಸಿಯೂ ಕಾರಿನ ಎಂಜಿನ್ ಆನ್ ಮಾಡಬಹುದಲ್ಲವೇ? ಒಮ್ಮ ಯೋಚಿಸಿ….

Electric Adujustable seats: ಒಬ್ಬರೇ ಬಳಸುವುದಾದರೆ..
ಕಾರನ್ನು ಸದಾ ನೀವೇ ಓಡಿಸುವಿರಾದರೆ ಸೀಟನ್ನು ಪದೇ ಪದೇ ಹೊಂದಿಸಿಕೊಳ್ಳುವ ಅಗತ್ಯವೇನಿದೆ. ಆದರೆ ಇದಕ್ಕಾಗಿ ಇನ್ನಷ್ಟು ಹೆಚ್ಚುವರಿ ಹಣ ನೀಡುವ ಬದಲು, ಸಾಮಾನ್ಯ ಸೀಟ್ ಹೊಂದಿಸಿಕೊಳ್ಳುವ ವ್ಯವಸ್ಥೆಯ ಕಾರು ಖರೀದಿಯತ್ತ ಗಮನ ಕೊಡುವುದರಿಂದ ಜೇಬಿಗೆ ಹೊರೆ ಕಡಿಮೆ.
Auto Turn Indicators: ತಿರುಗುವಾಗ ಮಾತ್ರ
ಯಾವುದೇ ಕಾರು ಅಥವಾ ವಾಹನವಾಗಲೀ ತಿರುವು ಬರುವುದಕ್ಕೂ ಮೊದಲೇ ಇಂಡಿಕೇಟರ್ ಅಥವಾ ಕೈ ಹೊರಕ್ಕೆ ಚಾಚುವ ಮೂಲಕ ಇತರ ಸವಾರರಿಗೆ ನಾವು ತಿರುಗುತ್ತಿರುವ ಮಾಹಿತಿ ನೀಡಲಾಗುತ್ತದೆ. ಇದು ಸರ್ವೆಸಾಮಾನ್ಯ. ಆದರೆ ಇತ್ತೀಚಿನ ಕೆಲ ಕಾರುಗಳಲ್ಲಿ ಅದಕ್ಕೂ ಆಟೊಮ್ಯಾಟಿಕ್ ಬಂದಿದೆ. ಆಟೊ ಟರ್ನ್ ಇಂಡಿಕೇಟರ್ಸ್ ನೀಡಲಾಗಿದೆ. ಅಂದರೆ ತಿರುವು ಬಂದ ನಂತರ ಸ್ಟಿಯರಿಂಗ್ ತಿರುಗಿಸಿದರೆ ಇದು ಇಂಡಿಕೇಟರ್ ದೀಪ ಹೊಳೆಯಲಾರಂಭಿಸುತ್ತದೆ. ಹಾಗಿದ್ದ ಮೇಲೆ ಈ ಸೌಲಭ್ಯದ ಅಗತ್ಯವಾದರೂ ಏನಿದೆ…?
ಕಾರು ಖರೀದಿಸುವ ಮುನ್ನ ಇಂಥ ಒಂದಷ್ಟು ಅನುಪಯುಕ್ತ ಫೀಚರ್ಗಳನ್ನು ಕೈಬಿಟ್ಟಲ್ಲಿ ಅನಗತ್ಯ ಹೊರೆ ತಪ್ಪುವುದರ ಜತೆಗೆ, ಭವಿಷ್ಯದಲ್ಲಿ ಅವುಗಳ ನಿರ್ವಹಣೆಗೆ ಆಗಬಹುದಾದ ಖರ್ಚೂ ಉಳಿಯಲಿದೆ.
ಇದನ್ನು ಹೊರತುಪಡಿಸಿ ಮತ್ತೆ ಯಾವುದಾದರೂ ಪ್ರಯೋಜನವಿಲ್ಲದ ಫೀಚರ್ಗಳಿದ್ದಲ್ಲಿ ಕಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.