ವೂಲಿಂಗ್ ಬಿಂಗೊ ಆಧಾರಿತ ಪುಟ್ಟ EV ಕಾರು: ಭಾರತಕ್ಕೆ ಪೇಟೆಂಟ್ ಪಡೆದ MG ಮೋಟಾರ್ಸ್

ವೂಲಿಂಗ್ ಬಿಂಗೊ

ವಿವಿಧ ಮಾದರಿಯ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದ ವೂಲಿಂಗ್ ಬಿಂಗೊ ಎಂಬ ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್‌ ಅನ್ನು ಭಾರತದಲ್ಲಿ ಪರಿಚಯಿಸಲು ಎಂಜಿ ಮೋಟಾರ್ಸ್‌ ಇಂಡಿಯಾ ಪೇಟೆಂಟ್ ಪಡೆದಿದೆ.

ಈಗಾಗಲೇ ಕಾಮೆಟ್‌ ಇವಿ ಮಾದರಿ ಹೊಂದಿರುವ ಎಂಜಿ ಮೋಟಾರ್ಸ್‌ ಕಂಪನಿಯು ಜೆಎಸ್‌ಡಬ್ಲೂ ಸಮೂಹದ ಜತೆಗೂಡಿ 2025ರ ಅಂತ್ಯದ ವೇಳೆಗೆ ವೂಲಿಂಗ್ ಬಿಂಗೊ ಆಧಾರಿತ ಪುಟ್ಟ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ ಎಂದು ಮೂಲಗಳು ತಿಳಿಸಿವೆ.

ವಿನ್ಯಾಸ ಮತ್ತು ಪ್ಲಾಟ್‌ಫಾರ್ಮ್

ಎಂಜಿ ಬಿಂಗೊ ಇವಿ ಕಾರು ವೂಲಿಂಗ್ ಬಿಂಗೊ ಎಂಬ 4 ಮೀಟರ್‌ ಒಳಗಿನ ಕಾರಿನ ಮಾದರಿಯಂತೆಯೇ ಇರಲಿದೆ. ಐದು ಬಾಗಿಲಿನ ಹ್ಯಾಚ್‌ಬ್ಯಾಕ್ ಇದು. ಟಾಟಾ ಟಿಯಾಗೊಗಿಂತ ತುಸು ದೊಡ್ಡದು ಎನ್ನಬಹುದು. ಅಂದರೆ 3,950 ಮಿ.ಮೀ. ಉದ್ದ, 1,708 ಮಿ.ಮೀ. ಅಗಲ ಮತ್ತು 1,580 ಮಿ.ಮೀ. ಎತ್ತರ ಇರುವ ಕಾರು. ಕಾಮೆಂಟ್‌ ಬಾಕ್ಸ್‌ ಮಾದರಿಯಲ್ಲಿದ್ದರೆ, ಬಿಂಗೊ ದುಂಡಗಿನ ಆಕಾರದ ಕಾರು. ಎಲ್‌ಇಡಿ ಹೆಡ್‌ಲೈಟ್ಸ್‌, ಎಕ್ಸ್‌ ಆಕಾರದ ಡಿಆರ್‌ಎಲ್‌, ಬ್ಲಾಕ್‌ ಔಟ್‌ ಪಿಲ್ಲರ್‌ ಮತ್ತು ಹಿಂಬದಿ ಆವರಿಸಿರುವ ಎಲ್‌ಇಡಿ ಹೆಡ್‌ಲ್ಯಾಂಪ್‌. ಒಂದರ್ಥದಲ್ಲಿ ಹೇಳಬೇಕೆಂದರೆ ಫಿಯೆಟ್‌ನ 500 ಮಾದರಿಯ ಕಾರನ್ನೇ ನೋಡಿದಂತೆನಿಸಲಿದೆ.

ಕ್ಯಾಬಿನ್‌ ಒಳಗೆ ವೂಲಿಂಗ್ ಬಿಂಗೊವನ್ನೇ ಎಂಜಿ ಬಿಂಗೊ ಅನುಕರಿಸಿದೆ. ಎರಡು ದೊಡ್ಡ ಸ್ಕ್ರೀನ್‌ ಇದೆ. ಇದರಲ್ಲಿ ಇನ್ಫೊಟೈನ್ಮೆಂಟ್‌ ಮತ್ತು ಇನ್‌ಸ್ಟ್ರುಮೆಂಟೇಷನ್‌ ಲಭ್ಯ. 2 ಸ್ಪೋಕ್‌ನ ಸ್ಟಿಯರಿಂಗ್‌ ನೀಡಲಾಗಿದೆ. ಎರಡು ಬಣ್ಣದ ಒಳಾಂಗಣ, ಕ್ರೂಸ್‌ ಕಂಟ್ರೋಲ್, ಆರು ಮಾದರಿಯ ಎಲೆಕ್ಟ್ರಿಕಲ್‌ ಅಡ್ಜೆಸ್ಟಬಲ್ ಡ್ರೈವರ್‌ ಸೀಟ್‌ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌, ಅದೂ ಆಟೊ ಹೋಲ್ಡ್‌ ಜತೆಗೆ ಮತ್ತು ಮೃದುವಾಗಿ ಹಿತ ನೀಡುವ ವಸ್ತುಗಳ ಬಳಕೆ ಇದರ ವಿಶೇಷ.

ಎಂಜಿ ಬಿಂಗೊ ಸಾಮರ್ಥ್ಯ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೂಲಿಂಗ್ ಬಿಂಗೊ ಮೂರು ಮಾದರಿಯ ಬ್ಯಾಟರಿ ಆಯ್ಕೆಯಲ್ಲಿ ಲಭ್ಯವಿದೆ. 203 ಕಿ.ಮೀ. ದೂರ ಕ್ರಮಿಸುವ 17.3 ಕಿಲೋ ವ್ಯಾಟ್‌ ಸಾಮರ್ಥ್ಯದ್ದು, 333 ಕಿ.ಮೀ. ದೂರ ಕ್ರಮಿಸುವ 31.9 ಕಿಲೋ ವ್ಯಾಟ್‌ ಹಾಗೂ 410 ಕಿ.ಮೀ. ದೂರ ಕ್ರಮಿಸುವ 37.9 ಕಿಲೋ ವ್ಯಾಟ್‌ ಸಾಮರ್ಥ್ಯದಲ್ಲಿದೆ. ಇವುಗಳಿಗೆ 30 ಕಿಲೋ ವ್ಯಾಟ್ ಅಥವಾ 50 ಕಿಲೋ ವ್ಯಾಟ್‌ ಎಲೆಕ್ಟ್ರಿಕಲ್ ಮೋಟಾರ್‌ ಲಭ್ಯ. ಈ ಕಾರು ಪ್ರತಿ ಗಂಟೆಗೆ ಗರಿಷ್ಠ 100ರಿಂದ 130 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಎಂಜಿ ಮೋಟಾರ್ಸ್ ಕಂಪನಿಯು 31.9 ಕಿಲೋ ವ್ಯಾಟ್ ಮತ್ತು 37.9 ಕಿಲೋ ವ್ಯಾಟ್‌ ಮಾದರಿಯನ್ನು ಭಾರತದಲ್ಲಿ ಪರಿಚಯಿಸುವ ಸಾಧ್ಯತೆ ಇದೆ.

ಎಂಜಿ ಬಿಂಗೊ ಇವಿ ಮಾದರಿಯು ₹9ಲಕ್ಷದಿಂದ ₹12ಲಕ್ಷ (ಎಕ್ಸ್‌ ಶೋರೂಂ) ಬೆಲೆಯಲ್ಲಿ ಲಭ್ಯ ಎಂದೆನ್ನಲಾಗುತ್ತಿದೆ. ಹಾಗಾದಲ್ಲಿ ಟಾಟಾ ಟಿಯಾಗೊ ಇವಿ ಮತ್ತು ಸಿಟ್ರನ್‌ ಇಸಿ3 ಮಾದರಿಗೆ ನೇರ ಸ್ಪರ್ಧೆಯನ್ನು ನೀಡಲಿದೆ.

ಎಂಜಿ ಕ್ಲೌಡ್‌ ಇವಿ ಬಿಡುಗಡೆ ನಂತರದಲ್ಲಿ ಎಂಜಿ ಬಿಂಗೊ ರಸ್ತೆಗಿಳಿಯುವ ಸಾಧ್ಯತೆಗಳಿವೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ