ಆರು ವರ್ಷಗಳ ಹಿಂದೆ ಟಾಟಾ ನ್ಯಾನೊ ಕೊನೆಯ ಕಾರನ್ನು ಹೊಂದಿದ್ದು ಯಾರು ಎಂಬ ಚರ್ಚೆಗಳು ಜೋರಾಗಿದ್ದವು. ದೇಶದ ಪ್ರತಿಯೊಬ್ಬರೂ ಕಾರು ಹೊಂದಬೇಕು ಎಂಬ ಖ್ಯಾತ ಉದ್ಯಮಿ ದಿ. ರತನ್ ಟಾಟಾ ಅವರ ಕನಸಿಕ ಕೂಸಿನ ಕೊನೆಯ ಪಯಣ ಎಂದೇ ಸುದ್ದಿಯಾಗಿತ್ತು. ಇನ್ನೆಂದೂ ಬಾರದ ನ್ಯಾನೊ ಕೊನೆಯ ಕಾರನ್ನು ರತನ್ ಟಾಟಾ ಅವರ ಕೊನೆಗಾಲದ ಆಪ್ತ ಶಾಂತನು ನಾಯ್ಡು ಖರೀದಿಸಿ, ಅದಕ್ಕೆ ‘ಲಿಲ್ಲಿ’ ಎಂಬ ಹೆಸರಿಟ್ಟಿದ್ದೂ ಸದ್ದು ಮಾಡಿತು.
ಆದರೆ ಈಗ ಅದೇ ನ್ಯಾನೊ ಹೊಸರೂಪದೊಂದಿಗೆ ಮರಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದರೆ ಈ ಬಾರಿ ಇದು ಸಾಮಾನ್ಯ ಕಾರಾಗಿ ಬಂದಿಲ್ಲ. ಬದಲಿಗೆ ಕೆಳ ಮಧ್ಯಮ ವರ್ಗದವರ ಕಾರಿನ ಕನಸಿಗೆ ದೊಡ್ಡ ರೆಕ್ಕೆ ಕಟ್ಟುವಂತಿದೆ. ಬೆಲೆ ಅಗ್ಗವೇ ಆದರೂ, ಸಾಮಾನ್ಯವಾಗಿ ಇಂದಿನ ಬಹುತೇಕ ಕಾರುಗಳಲ್ಲಿರಬಹುದಾದ ಸನ್‌ರೂಫ್, ಅಲಾಯ್ ವೀಲ್, ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ ಜತೆಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 40 ಕಿ.ಮೀ. ಮೈಲೇಜ್ ಕೂಡಾ ನೀಡುವಂತೆ ಅಭಿವೃದ್ಧಿಪಡಿಸಲಾಗಿದೆ ಎಂಬುದೇ ಈ ಅಚ್ಚರಿಗೆ ಕಾರಣ.
ಹೇಗಿದೆ 2025ರ ನ್ಯಾನೊ ವಿನ್ಯಾಸ?
ಅಷ್ಟಮುಖದ ಮುಂಭಾಗದ ಗ್ರಿಲ್ ಸ್ಪೋರ್ಟಿ ಲುಕ್ ನೀಡಿದೆ. ಸಪೂರವಾದ ಎಲ್‌ಇಡಿ ಹೆಡ್‌ಲ್ಯಾಂಪ್, ಹಗಲಿನಲ್ಲಿ ಬೆಳಗುವ ಡಿಆರ್‌ಎಲ್, ಹೊಸ ಬಣ್ಣ ಮತ್ತು ಬೋಲ್ಡ್ ಅಲಾಯ್ ವೀಲ್ ಯುವ ಸಮುದಾಯವನ್ನು ಆಕರ್ಷಿಸುವಂತಿದೆ.
ಕೇವಲ 3.1 ಮೀಟರ್ ಉದ್ದದ ಈ ಹೊಸ ನ್ಯಾನೊ 180 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದು ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ ಕಾರು. ಗುಂಡಿ ರಸ್ತೆಗಳಿಗೂ ಸೈ, ಸಂದಿಯಲ್ಲಿ ಸಾಗಲು, ಕಡಿಮೆ ಜಾಗದಲ್ಲಿ ಪಾರ್ಕಿಂಗ್ ಮಾಡಲೂ ಇದು ಸಲೀಸು.
ಇದರ ಎಂಜಿನ್ ಸಾಮರ್ಥ್ಯವೇನು?
624 ಸಿಸಿ ಟ್ವಿನ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ನ್ಯಾನೊ 38 ಪಿಎಸ್ ಶಕ್ತಿಯನ್ನು ಮತ್ತು 51 ನ್ಯಾನೊ ಮೀಟರ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಗ್ರಾಹಕರ ಆಯ್ಕೆಗೆ ತಕ್ಕಂತೆ 5 ಸ್ಪೀಡ್‌ನ ಮ್ಯಾನುಯಲ್ ಮತ್ತು ಆಟೊಮೆಟೆಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಇದರದ್ದು.
ಇದರೊಂದಿಗೆ ಟರ್ಬೊ ಪೆಟ್ರೋಲ್, ಸಿಎನ್‌ಜಿ ವೇರಿಯಂಟ್‌ಗೂ ಯೋಜನೆಯನ್ನು ಟಾಟಾ ಮೋಟಾರ್ಸ್ ರೂಪಿಸಿರುವಂತಿದೆ. ಇದರೊಂದಿಗೆ ಸಂಪೂರ್ಣ ಬ್ಯಾಟರಿ ಚಾಲಿತ ಇವಿ ನ್ಯಾನೊ ಕೂಡಾ ಭವಿಷ್ಯದಲ್ಲಿ ರಸ್ತೆಗಿಳಿಯಬಹುದು. 2025ರ ನ್ಯಾನೊ ಪ್ರತಿ ಲೀಟರ್ ಪೆಟ್ರೋಲ್‌ಗೆ 40 ಕಿ.ಮೀ. ದೂರ ಕ್ರಮಿಸಬಹುದಾದಷ್ಟು ಇಂಧನ ಕ್ಷಮತೆ ಹೊಂದಿದೆ. ಪುಟ್ಟ ಕುಟುಂಬಕ್ಕೆ ಹಾಗೂ ಸಣ್ಣ ಓಡಾಟಕ್ಕೆ, ಜೇಬಿಗೆ ಹೊರೆಯಾಗದಂತೆ ಅಚ್ಚುಕಟ್ಟಾದ ಕಾರು ಇದಾಗಿದೆ.

2025ರ ನ್ಯಾನೊ ಕಾರಿನ ಪ್ರಮುಖ ಹೈಲೈಟ್ಸ್‌ಗಳು ಏನು?
- 7 ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ
- ಡಿಜಿಟಲ್ ಡ್ರೈವ್ ಡಿಸ್‌ಪ್ಲೇ ಕ್ಲಸ್ಟರ್
- ಸ್ಟಿಯಿರಿಂಗ್‌ನಲ್ಲೇ ಆಡಿಯೊ ಕಂಟ್ರೋಲ್
- ಬ್ಲೂಟೂತ್, ಯುಎಸ್‌ಬಿ ಮತ್ತು ಆಕ್ಸ್
- ಪವರ್ ವಿಂಡೊ ಮತ್ತು ಸೆಂಟ್ರಲ್ ಲಾಕಿಂಗ್
- ಎಲೆಕ್ಟ್ರಿಕ್ ಸನ್‌ರೂಫ್
- ಆರಾಮಕ್ಕೆ ಮುಂಭಾಗದ ಆಸನಗಳಲ್ಲಿ ರಿಕ್ಲೇನಿಂಗ್ ಸೌಕರ್ಯ
ನ್ಯಾನೊ ಕಾರಿನಲ್ಲಿ ಸುರಕ್ಷತೆಗೆ ಏನೇನಿದೆ?
- 4 ಏರ್ ಬ್ಯಾಗ್‌ಗಳು
- ಎಬಿಎಸ್ ಮತ್ತು ಇಬಿಡಿ
- ಇಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್
- ಹಿಂಬದಿ ಚಾಲನೆಗೆ ಪಾರ್ಕಿಂಗ್ ಸೆನ್ಸರ್ ಮತ್ತು ಕ್ಯಾಮೆರಾ
- ಕಾರಿನ ಹೊರಕವಚಕ್ಕೆ ಉತ್ಕೃಷ್ಟ ಗ್ರೇಡ್‌ನ ಸ್ಟೀಲ್ ಬಳಕೆ
- ಸೀಟ್‌ಬೆಲ್ಟ್ ರಿಮೈಂಡರ್
- ಎಲೆಕ್ಟ್ರಾನಿಕ್ ಸ್ಟಬಲಿಟಿ ಕಂಟ್ರೋಲ್
- ಬದಿಯಿಂದ ಹೆಚ್ಚು ಹಾನಿಯಾಗದಂತೆ ಬೀಮ್ ನೀಡಲಾಗಿದೆ
ಇಷ್ಟೆಲ್ಲಾ ಸೌಕರ್ಯ ಇರುವ ನ್ಯಾನೊ ಬೆಲೆ ಎಷ್ಟು?
ಇಷ್ಟೆಲ್ಲಾ ಅತ್ಯಾಧುನಿಕ ಸೌಕರ್ಯಗಳನ್ನು ನೀಡಿರುವ 2025ರ ನ್ಯಾನೊ ಕಾರು ಅಗ್ಗವೂ ಹೌದು. ವರದಿಗಳ ಪ್ರಕಾರ ನ್ಯಾನೊ ಕಾರಿನ ಎಕ್ಸ್ ಶೋರೂಂ ಬೆಲೆ ₹2,80 ಲಕ್ಷ ಎಂದೆನ್ನಲಾಗಿದೆ. ಆದರೆ ಬೇಸ್ ವೇರಿಯಂಟ್‌ನ ಬೆಲೆ ₹1.45 ಲಕ್ಷ ಎಂದೆನ್ನಲಾಗಿದೆ. ಇಎಂಐ ಸೌಲಭ್ಯವೂ ಲಭ್ಯವಿದ್ದು, ತಿಂಗಳಿಗೆ ₹1ಸಾವಿರದಿಂದ ₹1,500 ಸಾವಿರದಷ್ಟು ಕಟ್ಟಬೇಕಾಗಬಹುದು. ಹೀಗಾಗಿ ಸಣ್ಣ, ಕಡಿಮೆ ಆದಾಯದ ಕುಟುಂಬ, ಮೊದಲ ಬಾರಿಗೆ ಕಾರು ಖರೀದಿಸುವವರು, ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದೆ.